ಹೊಸದಿಲ್ಲಿ: ನ್ಯಾಯಾಲಯದ ತೀರ್ಪಿನಂತೆ ತನ್ನ ಸಾಲಬಾಕಿ 6,203 ಕೋಟಿ ರೂ.ಗಳಾಗಿದ್ದು, ಬ್ಯಾಂಕುಗಳು ತನ್ನ ಆಸ್ತಿಗಳ ಮಾರಾಟದ ಮೂಲಕ 14,131.60 ಕೋಟಿ ರೂ.ಗಳನ್ನು ವಾಪಸ್ ಪಡೆದುಕೊಂಡಿವೆ, ಆದರೂ ತಾನು ‘ಆರ್ಥಿಕ ಅಪರಾಧಿ’ಯಾಗಿ ಮುಂದುವರಿದಿದ್ದೇನೆ ಎಂದು ದೇಶಭ್ರಷ್ಟ ಉದ್ಯಮಿ ವಿಜಯ ಮಲ್ಯ ಹೇಳಿದ್ದಾರೆ.
ತನ್ನ ಸಾಲಕ್ಕಿಂತ ದುಪ್ಪಟ್ಟು ಮೊತ್ತವನ್ನು ವಸೂಲು ಮಾಡಿದ್ದನ್ನು ಜಾರಿ ನಿರ್ದೇಶನಾಲಯ(ಈ.ಡಿ.) ಮತ್ತು ಬ್ಯಾಂಕುಗಳು ಕಾನೂನುಬದ್ಧವಾಗಿ ಸಮರ್ಥಿಸಿಕೊಳ್ಳದಿದ್ದರೆ ತಾನು ಪರಿಹಾರಕ್ಕೆ ಅರ್ಹನಾಗಿದ್ದೇನೆ ಎಂದು ಮಲ್ಯ ಬುಧವಾರ ಎಕ್ಸ್ ಪೋಸ್ಟ್ನಲ್ಲಿ ಪ್ರತಿಪಾದಿಸಿದ್ದಾರೆ.
‘ಸಾಲ ವಸೂಲಾತಿ ನ್ಯಾಯಮಂಡಳಿಯು ಕಿಂಗ್ಫಿಷರ್ ಏರ್ಲೈನ್ಸ್(ಕೆಎಫ್ಎ)ನ ಸಾಲ ಬಾಕಿಯನ್ನು 1,200 ಕೋಟಿ ರೂ.ಬಡ್ಡಿ ಸೇರಿದಂತೆ 6,203 ಕೋಟಿ ರೂ.ಗಳೆಂದು ನಿರ್ಣಯಿಸಿದೆ. 6,203 ಕೋಟಿ ರೂ.ಸಾಲದ ವಿರುದ್ಧ ಬ್ಯಾಂಕುಗಳು ಈ.ಡಿ.ಮೂಲಕ 14,131.60 ಕೋಟಿ ರೂ.ಗಳನ್ನು ಮರುವಸೂಲು ಮಾಡಿವೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಪ್ರಕಟಿಸಿದ್ದಾರೆ ಮತ್ತು ನಾನಿನ್ನೂ ಆರ್ಥಿಕ ಅಪರಾಧಿಯಾಗಿದ್ದೇನೆ. ಈ.ಡಿ.ಮತ್ತು ಬ್ಯಾಂಕುಗಳು ನನ್ನಿಂದ ಸಾಲದ ಎರಡು ಪಟ್ಟು ಮೊತ್ತವನ್ನು ವಸೂಲು ಮಾಡಿದ್ದನ್ನು ಕಾನೂನುಬದ್ಧವಾಗಿ ಸಮರ್ಥಿಸಿಕೊಳ್ಳದಿದ್ದರೆ ನಾನು ಪರಿಹಾರಕ್ಕೆ ಅರ್ಹನಾಗಿದ್ದೇನೆ ಮತ್ತು ಅದಕ್ಕಾಗಿ ಹೋರಾಟ ಮುಂದುವರಿಸುತ್ತೇನೆ’ ಎಂದು ಮಲ್ಯ ಹೇಳಿದ್ದಾರೆ.
ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಮತ್ತು ಕಂಪನಿಗಳ ಆಸ್ತಿಗಳನ್ನು ಈ.ಡಿ.ಕಾಲಕಾಲಕ್ಕೆ ಜಫ್ತಿ ಮಾಡಿರುವ ಹಲವಾರು ಪ್ರಮುಖ ಪ್ರಕರಣಗಳನ್ನು ಸೀತಾರಾಮನ್ ಮಂಗಳವಾರ ಲೋಕಸಭೆಯಲ್ಲಿ ಪಟ್ಟಿ ಮಾಡಿದ್ದರು.
ಪೂರಕ ಅನುದಾನಗಳಿಗೆ ಬೇಡಿಕೆ ಮೇಲೆ ಚರ್ಚೆಗೆ ಉತ್ತರಿಸಿದ ಸಂದರ್ಭ ಸೀತಾರಾಮನ್,ಈ.ಡಿ.22,280 ಕೋಟಿ ರೂ.ಗಳ ಆಸ್ತಿಗಳನ್ನು ವಶಪಡಿಸಿಕೊಂಡಿದ್ದು,ಪ್ರಮುಖ ಪ್ರಕರಣಗಳು ಮಾತ್ರ ಇದರಲ್ಲಿ ಸೇರಿವೆ. ಈ ಪೈಕಿ ವಿಜಯ ಮಲ್ಯರ 14,131.60 ಕೋಟಿ ರೂ.ಮೌಲ್ಯದ ಆಸ್ತಿಗಳು ಸೇರಿದ್ದು, ಅವುಗಳನ್ನು ಸಾರ್ವಜನಿಕ ವಲಯದ ಸಾಲದಾತ ಬ್ಯಾಂಕ್ಗಳಿಗೆ ಹಸ್ತಾಂತರಿಸಲಾಗಿದೆ. ಇನ್ನೋರ್ವ ದೇಶಭ್ರಷ್ಟ ಉದ್ಯಮಿ ನೀರವ್ ಮೋದಿ ಪ್ರಕರಣದಲ್ಲಿ 1,052.58 ಕೋಟಿ ರೂ.ಗಳನ್ನು ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳಿಗೆ ಮರಳಿಸಲಾಗಿದೆ ಎಂದು ತಿಳಿಸಿದ್ದಾರೆ.