ತ್ಬಿಲಿಸಿ: ಜಾರ್ಜಿಯಾದ ಭಾರತೀಯ ರಾಯಭಾರ ಕಚೇರಿಯ ಪ್ರಕಾರ, ಗುಡೌರಿಯ ಬೆಟ್ಟದ ತಪ್ಪಲಿನಲ್ಲಿರುವ ರೆಸಾರ್ಟ್ನ ಹೋಟೆಲ್ನಲ್ಲಿ 12 ಮಂದಿ ಭಾರತೀಯರು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.
ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಯಾವುದೇ ಗಾಯದ ಗುರುತು ಅಥವಾ ಹಿಂಸಾಚಾರದ ಗುರುತು ಪತ್ತೆಯಾಗಿಲ್ಲ ಎಂದು ಜಾರ್ಜಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ. ಎಲ್ಲರೂ ಕಾರ್ಬನ್ ಮಾನಾಕ್ಸೈಡ್ ವಿಷ ಸೇವಿಸಿ ಮೃತಪಟ್ಟಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮೃತಪಟ್ಟಿರುವ ಎಲ್ಲ 12 ಮಂದಿ ಭಾರತೀಯ ಪ್ರಜೆಗಳಾಗಿದ್ದಾರೆ ಎಂದು ತ್ಬಿಲಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ. ಆದರೆ, ಮೃತಪಟ್ಟಿರುವವರ ಪೈಕಿ 11 ಮಂದಿ ವಿದೇಶೀಯರಾಗಿದ್ದು, ಓರ್ವ ನಮ್ಮ ದೇಶದ ಪ್ರಜೆಯಾಗಿದ್ದಾರೆ ಎಂದು ಜಾರ್ಜಿಯಾ ಆಂತರಿಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಮೃತಪಟ್ಟಿರುವ ಎಲ್ಲರೂ ಅದೇ ಭಾರತೀಯ ರೆಸ್ಟೋರೆಂಟ್ನ ಉದ್ಯೋಗಿಗಳಾಗಿದ್ದು, ಅಲ್ಲಿನ ಎರಡನೆ ಅಂತಸ್ತಿನಲ್ಲಿರುವ ಮಲಗುವ ಕೋಣೆಯಲ್ಲಿ ಅವರ ಮೃತದೇಹಗಳು ಪತ್ತೆಯಾಗಿವೆ ಎಂದೂ ಅದು ಹೇಳಿದೆ.
“ಜಾರ್ಜಿಯಾದ ಗುಡೌರಿಯಲ್ಲಿ 12 ಮಂದಿ ಭಾರತೀಯ ಪ್ರಜೆಗಳು ಮೃತಪಟ್ಟಿರುವ ಸಂಗತಿ ಈಗಷ್ಟೇ ಭಾರತೀಯ ರಾಯಭಾರ ಕಚೇರಿಗೆ ತಿಳಿಯಿತು. ದುಃಖತಪ್ಯ ಕುಟುಂಬಗಳಿಗೆ ನಮ್ಮ ತೀವ್ರ ಸಂತಾಪಗಳು. ತಮ್ಮ ಜೀವ ಕಳೆದುಕೊಂಡ ಭಾರತೀಯ ಪ್ರಜೆಗಳ ಬಗ್ಗೆ ವಿವರಗಳನ್ನು ಪಡೆಯಲು ಸ್ಥಳೀಯ ಪ್ರಾಧಿಕಾರಗಳೊಂದಿಗೆ ಭಾರತೀಯ ರಾಯಭಾರ ಕಚೇರಿ ಸಂಪರ್ಕದಲ್ಲಿದೆ. ಸಾಧ್ಯವಿರುವ ಎಲ್ಲ ನೆರವನ್ನೂ ಮೃತರ ಕುಟುಂಬಗಳಿಗೆ ಒದಗಿಸಲಾಗುವುದು” ಎಂದು ತನ್ನ ಪ್ರಕಟಣೆಯಲ್ಲಿ ಭಾರತೀಯ ರಾಯಭಾರ ಕಚೇರಿ ಭರವಸೆ ನೀಡಿದೆ.
ಜಾರ್ಜಿಯಾದ ಅಪರಾಧ ಸಂಹಿತೆಯ 116ನೇ ವಿಧಿ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.