ಅಮೆರಿಕ ಸಂಸತ್ತಿನ ಸ್ಪೀಕರ್ ಜತೆ ತೈವಾನ್ ಅಧ್ಯಕ್ಷರ ಚರ್ಚೆ| ಚೀನಾ ಆಕ್ಷೇಪ | Taiwan President’s discussion with US House Speaker
ತೈಪೆ : ಅಮೆರಿಕ ಸಂಸತ್‍ನ ಸ್ಪೀಕರ್ ಮೈಕ್ ಜಾನ್ಸನ್ ಜತೆ ತೈವಾನ್ ಅಧ್ಯಕ್ಷ ಲಾಯ್ ಚಿಂಗ್-ಟೆ ದೂರವಾಣಿ ಮೂಲಕ ಮಾತನಾಡಿರುವುದನ್ನು ಚೀನಾ ಆಕ್ಷೇಪಿಸಿದ್ದು, ತೈವಾನ್ ವಿಷಯವು ಅಮೆರಿಕ-ಚೀನಾ ಸಂಬಂಧಗಳಲ್ಲಿ ಕೆಂಪು ಗೆರೆಯಾಗಿದ್ದು ಅದನ್ನು ದಾಟಬಾರದು ಎಂದು ಎಚ್ಚರಿಕೆ ನೀಡಿದೆ.
ಬುಧವಾರ(ಡಿ.4) ಪೆಸಿಫಿಕ್ ದ್ವೀಪರಾಷ್ಟ್ರಗಳ ಪ್ರವಾಸದ ಸಂದರ್ಭ ಲಾಯ್ ಚಿಂಗ್-ಟೆ ಅಮೆರಿಕ ಸ್ವಾಮ್ಯದ ಹವಾಯಿ ಮತ್ತು ಗುವಾಮ್ ದ್ವೀಪಗಳಿಗೆ ಭೇಟಿ ನೀಡಿದ್ದರು. ಆಗ ಅಧ್ಯಕ್ಷರು ದೂರವಾಣಿ ಮೂಲಕ ಜಾನ್ಸನ್ ಜತೆ ಮಾತುಕತೆ ನಡೆಸಿದ್ದಾರೆ ಎಂದು ತೈವಾನ್ ಅಧ್ಯಕ್ಷರ ಕಚೇರಿಯ ವಕ್ತಾರರು ಹೇಳಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಲಿನ್ ಜಿಯಾನ್ `ಅಮೆರಿಕಕ್ಕೆ ಲಾಯ್ ಭೇಟಿಯ ಕುರಿತು ಚೀನಾದ ನಿಲುವನ್ನು ಈಗಾಗಲೇ ಅಮೆರಿಕಕ್ಕೆ ಸ್ಪಷ್ಟಪಡಿಸಿದ್ದೇವೆ’ ಎಂದಿದ್ದಾರೆ. ತೈವಾನ್ ವಿಷಯವು ಚೀನಾದ ಪ್ರಮುಖ ಹಿತಾಸಕ್ತಿಗಳ ತಿರುಳು ಮತ್ತು ಚೀನಾ-ಅಮೆರಿಕ ಸಂಬಂಧಗಳಲ್ಲಿ ದಾಟದ ಮೊದಲ ಕೆಂಪು ರೇಖೆ ಎಂದು ಮತ್ತೊಮ್ಮೆ ಒತ್ತಿ ಹೇಳುತ್ತೇವೆ. ಚೀನಾದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುವುದನ್ನು ಮತ್ತು ತೈವಾನ್ ಸ್ವಾತಂತ್ರ್ಯ ಮತ್ತು ಪ್ರತ್ಯೇಕತಾವಾದಿಗಳಿಗೆ ತಪ್ಪು ಸಂಕೇತಗಳನ್ನು ಕಳುಹಿಸುವುದನ್ನು ಅಮೆರಿಕ ನಿಲ್ಲಿಸಬೇಕು. ಚೀನಾ ತನ್ನ ರಾಷ್ಟ್ರೀಯ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ದೃಢವಾಗಿ ರಕ್ಷಿಸಲು ದೃಢವಾದ ಮತ್ತು ಬಲವಾದ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಹವಾಯ್‍ಗೆ ಭೇಟಿ ನೀಡಿದ್ದ ಲಾಯ್ ಚೆಂಗ್-ಟೆ ಅಮೆರಿಕ ಸಂಸತ್‍ನ ಮಾಜಿ ಸ್ಪೀಕರ್ ನ್ಯಾನ್ಸಿ ಪೆಲೋಸಿ ಜತೆಗೂ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು ಚೀನಾದ ಮಿಲಿಟರಿ ಬೆದರಿಕೆ ಬಗ್ಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.