EBM News Kannada
Leading News Portal in Kannada

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಬರೋಡಕ್ಕೆ ಶರಣಾದ ಕರ್ನಾಟಕ

0


ಇಂದೋರ್: ಆರಂಭಿಕ ಬ್ಯಾಟರ್ ಶಾಶ್ವತ್ ರಾವತ್(63 ರನ್, 37 ಎಸೆತ, 7 ಬೌಂಡರಿ, 2 ಸಿಕ್ಸರ್) ಅರ್ಧಶತಕದ ಕೊಡುಗೆಯ ನೆರವಿನಿಂದ ಬರೋಡ ಕ್ರಿಕೆಟ್ ತಂಡವು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡವನ್ನು 4 ವಿಕೆಟ್‌ಗಳ ಅಂತರದಿಂದ ಮಣಿಸಿದೆ.

ಮಂಗಳವಾರ ನಡೆದ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡವು ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿತು.

ಗೆಲ್ಲಲು 170 ರನ್ ಗುರಿ ಬೆನ್ನಟ್ಟಿದ ಬರೋಡ ತಂಡ 18.5 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 172 ರನ್ ಗಳಿಸಿತು.

ಬರೋಡ ತಂಡವು ಆರಂಭಿಕ ಆಟಗಾರ ಅಭಿಮನ್ಯುಸಿಂಗ್ ರಾಜ್‌ಪೂತ್‌ರನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡಿತು. ಆಗ ಜೊತೆಯಾದ ರಾವತ್ ಹಾಗೂ ಭಾನು ಪನಿಯಾ(42 ರನ್, 24 ಎಸೆತ)ಎರಡನೇ ವಿಕೆಟ್‌ಗೆ 89 ರನ್ ಜೊತೆಯಾಟ ನಡೆಸಿದರು. 11ನೇ ಓವರ್‌ನಲ್ಲಿ ಸತತ 3 ಎಸೆತಗಳಲ್ಲಿ ಅಗ್ರ ಸ್ಕೋರರ್ ರಾವತ್, ಸಹೋದರರಾದ ಹಾರ್ದಿಕ್ ಪಾಂಡ್ಯ (0)ಹಾಗೂ ಕೃನಾಲ್ ಪಾಂಡ್ಯ(0)ವಿಕೆಟ್‌ಗಳನ್ನು ಉರುಳಿಸಿದ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್ ಪೂರೈಸಿದರು.

ಐಪಿಎಲ್ ಹರಾಜಿನಲ್ಲಿ ಸಿಎಸ್‌ಕೆ ತಂಡದಿಂದ ಮೂಲ ಬೆಲೆ 30 ಲಕ್ಷ ರೂ.ಗೆ ಖರೀದಿಸಲ್ಪಟ್ಟಿದ್ದ ಶ್ರೇಯಸ್ ಸದ್ಯ ದೇಶಿಯ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಈ ತನಕ ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಭಾನು ಪನಿಯಾ ಔಟಾದಾಗ ಬರೋಡ ತಂಡ 117 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ 6ನೇ ವಿಕೆಟ್‌ಗೆ 49 ರನ್ ಜೊತೆಯಾಟ ನಡೆಸಿದ ವಿಷ್ಣು ಸೋಲಂಕಿ(ಔಟಾಗದೆ 28)ಹಾಗೂ ಶಿವಲಿಕ್ ಶರ್ಮಾ(22 ರನ್) ಇನ್ನೂ 7 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡ ಸೇರಿಸಿದರು.

ಕರ್ನಾಟಕದ ಪರ ಎಸ್. ಗೋಪಾಲ್(4-19)ಯಶಸ್ವಿ ಪ್ರದರ್ಶನ ನೀಡಿದರೆ, ವಿದ್ಯಾಧರ ಪಾಟೀಲ್(1-41)ಹಾಗೂ ವಿಜಯಕುಮಾರ್(1-49)ತಲಾ ಒಂದು ವಿಕೆಟ್ ಪಡೆದರು.

*ಕರ್ನಾಟಕ ತಂಡ 169/8

ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕ ತಂಡವು ಮಧ್ಯಮ ಸರದಿಯ ಬ್ಯಾಟರ್ ಅಭಿನವ್ ಮನೋಹರ್(ಔಟಾಗದೆ 56, 34 ಎಸೆತ, 6 ಸಿಕ್ಸರ್)ನೀಡಿದ ಏಕಾಂಗಿ ಹೋರಾಟದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿತು.

ಅಗ್ರ ಕ್ರಮಾಂಕದ ಆಟಗಾರರಾದ ಆರ್. ಸ್ಮರಣ್(38 ರನ್, 35 ಎಸೆತ) ಹಾಗೂ ಕೆ.ಶ್ರೀಜಿತ್(22 ರನ್, 9 ಎಸೆತ) ಆಲ್‌ರೌಂಡರ್ ಶ್ರೇಯಸ್ ಗೋಪಾಲ್(18 ರನ್) ಎರಡಂಕೆ ದಾಟಿದರು. ನಾಯಕ ಮಯಾಂಕ್ ಅಗರ್ವಾಲ್(1) ಮತ್ತೊಮ್ಮೆ ವಿಫಲರಾದರು.

ಬರೋಡದ ಪರ ಕೃನಾಲ್ ಪಾಂಡ್ಯ(2-19)ಹಾಗೂ ಅತಿತ್ ಶೇಟ್(2-45)ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ: 20 ಓವರ್‌ಗಳಲ್ಲಿ 169/8

(ಅಭಿನವ್ ಮನೋಹರ್ ಔಟಾಗದೆ 56, ಸ್ಮರಣ್ 38, ಶ್ರೀಜಿತ್ 22, ಕೃನಾಲ್ ಪಾಂಡ್ಯ 2-19, ಅತಿತ್ 2-45)

ಬರೋಡ: 18.5 ಓವರ್‌ಗಳಲ್ಲಿ 172/6

(ಶಾಶ್ವತ್ ರಾವತ್ 63, ಭಾನು ಪನಿಯಾ 42, ವಿಷ್ಣು ಸೋಲಂಕಿ ಔಟಾಗದೆ 28, ಶ್ರೇಯಸ್ ಗೋಪಾಲ್ 4-19)

ಪಂದ್ಯಶ್ರೇಷ್ಠ: ಶಾಶ್ವತ್ ರಾವತ್.

Leave A Reply

Your email address will not be published.