EBM News Kannada
Leading News Portal in Kannada

ಪೇಜಾವರ ಶ್ರೀಗಳು ತಮ್ಮ ಹೇಳಿಕೆ ತಿರುಚಿಕೊಳ್ಳುತ್ತಿರುವುದು ವಿಪರ್ಯಾಸ : ಬಿ.ಕೆ.ಹರಿಪ್ರಸಾದ್

0


ಬೆಂಗಳೂರು : ಸಂವಿಧಾನ ಬದಲಾವಣೆಯ ಮುಂಚೂಣಿ ನಾಯಕರಂತೆ ವರ್ತಿಸುತ್ತಿದ್ದ ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ತಮ್ಮ ಹೇಳಿಕೆ ಹಾಗೂ ನಡವಳಿಕೆಗಳಿಂದ ಪ್ರಜ್ಞಾವಂತ ಸಮಾಜ ತಿರುಗಿ ಬಿದ್ದಿರುವುದನ್ನು ನೋಡಿ ‘ನಾನು ಸಂವಿಧಾನ ವಿರೋಧಿ ಹೇಳಿಕೆಯೇ ನೀಡಿಲ್ಲ’ ಎಂದು ತಾವೇ ಆಡಿದ ಮಾತುಗಳನ್ನು ತಿರುಚಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವ್ಯಂಗ್ಯ ಮಾಡಿದ್ದಾರೆ.

ಮಂಗಳವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಮಾಜ ದಾರಿ ತಪ್ಪಿದರೆ ತಿದ್ದುವ ಹಾಗೂ ಧರ್ಮದೊಳಗಿನ ಸಹಬಾಳ್ವೆಯ ತಿರುಳನ್ನು ತಿಳಿ ಹೇಳುವ ಸ್ವಾಮೀಜಿಗಳೇ ಸಮಾಜವನ್ನು ದಾರಿ ತಪ್ಪಿಸುತ್ತಿರುವುದು, ಸ್ವಾಸ್ಥ್ಯ ಸಮಾಜವನ್ನು ಒಡೆಯುವ ಹುನ್ನಾರ ಮಾತ್ರವಲ್ಲ, ಪೇಜಾವರರ ನಡೆ ಮತೀಯವಾದಿ ಸಂಘಟನೆ ನಾಯಕರಂತೆ ಕಾಣುತ್ತಿದೆ ಎಂದು ಟೀಕಿಸಿದ್ದಾರೆ.

ಸಂವಿಧಾನದಡಿಯಲ್ಲಿ ಚುನಾಯಿತ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯ ಮಾಧ್ಯಮ ವಕ್ತಾರರಂತೆ ‘ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿದ್ದಾರೆ’ ಎಂದು ಬಹಿರಂಗ ಹೇಳಿಕೆ ನೀಡುವುದು ಪೇಜಾವರರು ಬಿಜೆಪಿ ಪಕ್ಷದ ನಿಷ್ಠೆಯನ್ನು ಪದೇ ಪದೇ ಸಾಬೀತು ಮಾಡುತ್ತಿರುವಂತಿದೆ. ಆಧಾರ ಇಲ್ಲದೇ ಒಂದು ಸರಕಾರದ ಮೇಲೆ ಗಂಭೀರ ಆರೋಪಗಳನ್ನು ಮಾಡುವುದು ಯತಿಗಳಾದಂತವರಿಗೆ ಶೋಭೆಯಲ್ಲ ಎಂದು ಬಿ.ಕೆ.ಹರಿಪ್ರಸಾದ್ ಆಕ್ಷೇಪಿಸಿದ್ದಾರೆ.

ಸಂವಿಧಾನದ ವಿರೋಧಿ ನಿಲುವುಗಳಿಂದ ದಲಿತರ, ಬಹುಜನ ಶೋಷಿತ ಸಮುದಾಯಗಳ ಆಕ್ರೋಶವನ್ನು ಎದುರಿಸಲಾಗದೆ ಪೇಜಾವರ ಅಲ್ಪಸಂಖ್ಯಾತರ ವಿರುದ್ಧ ಮಾತಾಡುವ ಮೂಲಕ ಚರ್ಚೆಯನ್ನೇ ದಾರಿ ತಪ್ಪಿಸುತ್ತಿದ್ದಾರೆ. ಸಂವಿಧಾನ ಮೂಲಕವೇ ಆಯ್ಕೆಯಾಗಿ ಬಂದು, ಸಂವಿಧಾನ ಬದಲಾವಣೆಯ ಹೇಳಿಕೆ ನೀಡಿದ ಬಿಜೆಪಿ ನಾಯಕರಿಗೆ ಸಾರ್ವಜನಿಕ ಜೀವನದಲ್ಲಿ ಯೋಗ್ಯತೆಯೇ ಇಲ್ಲ ಎಂದು ಜನರು ತಕ್ಕ ಉತ್ತರ ನೀಡಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಸಂವಿಧಾನದ ವಿರುದ್ಧ ತಮಗಿರುವ ಅಸಹನೆ, ಆಕ್ರೋಶವನ್ನು ಸಾಬೀತು ಮಾಡುತ್ತಿರುವ ಪೇಜಾವರ ಶ್ರೀಗಳು, ಇದೇ ಸಂವಿಧಾನದಡಿಯಲ್ಲಿ ರಕ್ಷಣೆ ಪಡೆಯುತ್ತಿರುವುದನ್ನು ಮರೆಯಬಾರದು. ‘ತಮಗೆ ಗೌರವ ನೀಡುವ ಸಂವಿಧಾನ ಬರಲಿ’ ಎಂದು ಸಂವಿಧಾನದ ರಕ್ಷಕರಾಗಿರುವ ರಾಜ್ಯಪಾಲರಿಗೆ ಮನವಿ ನೀಡುವುದು ಖಂಡನೀಯ. ಕೂಡಲೇ ರಾಜ್ಯಪಾಲರು ಸಂವಿಧಾನ ವಿರೋಧಿ ಮನಸ್ಥಿತಿ ಸ್ವಾಮೀಜಿಗಳ ಮೇಲೆ ಕ್ರಮಕ್ಕೆ ಮುಂದಾಗಬೇಕು ಎಂದು ಹರಿಪ್ರಸಾದ್ ಒತ್ತಾಯಿಸಿದ್ದಾರೆ.

Leave A Reply

Your email address will not be published.