ಕೀವ್ : ಸಂಭಾವ್ಯ ವಾಯುದಾಳಿಯ ಮಾಹಿತಿ ಪಡೆದ ನಂತರ ಉಕ್ರೇನ್ ರಾಜಧಾನಿ ಕೀವ್ನಲ್ಲಿನ ಅಮೆರಿಕದ ರಾಯಭಾರ ಕಚೇರಿಯನ್ನು ಬುಧವಾರ ಮುಚ್ಚಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ `ವಾಷಿಂಗ್ಟನ್ ಪೋಸ್ಟ್’ ವರದಿ ಮಾಡಿದೆ.
ಮುನ್ನೆಚ್ಚರಿಕೆಯ ಕ್ರಮವಾಗಿ ರಾಯಭಾರ ಕಚೇರಿಯನ್ನು ಮುಚ್ಚಲಾಗುವುದು ಮತ್ತು ರಾಯಭಾರ ಕಚೇರಿಯ ಸಿಬ್ಬಂದಿಗಳಿಗೆ ಸುರಕ್ಷಿತ ಪ್ರದೇಶಕ್ಕೆ ತೆರಳಲು ಸೂಚಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಕಾನ್ಸುಲರ್ ವ್ಯವಹಾರಗಳ ವಿಭಾಗ ಹೇಳಿದೆ. ವಾಯುದಾಳಿಯ ಎಚ್ಚರಿಕೆ ಮೊಳಗಿದರೆ ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆರಳಲು ಸಿದ್ಧವಾಗಿರುವಂತೆ ಅಮೆರಿಕದ ಪ್ರಜೆಗಳಿಗೆ ರಾಯಭಾರ ಕಚೇರಿ ಸೂಚಿಸಿದೆ. ಅಮೆರಿಕ ಒದಗಿಸಿದ ಎಟಿಎಸಿಎಂಎಸ್ ಕ್ಷಿಪಣಿಗಳನ್ನು ಬಳಸಿ ಮಂಗಳವಾರ ಉಕ್ರೇನ್ ರಶ್ಯದ ವಿರುದ್ಧ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕ ರಾಯಭಾರ ಕಚೇರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.