ಭುವನೇಶ್ವರ: 20 ವರ್ಷ ವಯಸ್ಸಿನ ಬುಡಕಟ್ಟು ಜನಾಂಗದ ಯುವತಿಯನ್ನು ಥಳಿಸಿ, ಆಕೆಯ ಬಾಯಿಗೆ ಮಲ ತುರುಕಿದ ಅಮಾನವೀಯ ಘಟನೆ ಒಡಿಶಾದ ಬೊಲಂಜೀರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಬಂಗಮುಂಡ ಪೊಲೀಸ್ ಠಾಣೆ ವ್ಯಾಪ್ತಿಯ ಜುರಬಂಧ ಗ್ರಾಮದಲ್ಲಿ ಈ ಘಟನೆ ನವೆಂಬರ್ 16ರಂದು ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಬೇರೆ ಜನಾಂಗಕ್ಕೆ ಸೇರಿದವನಾಗಿದ್ದು, ಮಹಿಳೆಯ ಕೃಷಿ ಭೂಮಿಯಲ್ಲಿ ಟ್ರ್ಯಾಕ್ಟರ್ ಚಾಲನೆ ಮಾಡಿ ಬೆಳೆ ನಾಶಪಡಿಸಿದ್ದನ್ನು ಮಹಿಳೆ ಪ್ರತಿಭಟಿಸಿದ್ದಳು. ಈ ಹಂತದಲ್ಲಿ ಆರೋಪಿ, ಆಕೆಯ ಮೇಲೆ ಹಲ್ಲೆ ನಡೆಸಿ, ಬಾಯಿಗೆ ಮಲ ತುರುಕಿದ ಎಂದು ಎಫ್ಐಆರ್ನಲ್ಲಿ ವಿವರಿಸಲಾಗಿದೆ.
ಆಕೆಯ ಅತ್ತೆ ಮಧ್ಯಪ್ರವೇಶಿಸಿ ರಕ್ಷಣೆಗೆ ಮುಂದಾದಾಗ ಆಕೆಯ ಮೇಲೂ ಆರೋಪಿ ಹಲ್ಲೆ ನಡೆಸಿದ್ದಾನೆ. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಬಿಜೆಡಿ ಸಂಸದ ನಿರಂಜನ್ ಬೀಸಿ, ಪೊಲೀಸರು ಆರೋಪಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಆದಿವಾಸಿಗಳನ್ನು ಕೆರಳಿಸಿದೆ ಎಂದು ಹೇಳಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಹದಗೆಟ್ಟರೆಅದಕ್ಕೆ ರಾಜ್ಯ ಸರ್ಕಾರ ಹೊಣೆ ಎಂದು ಅವರು ಎಚ್ಚರಿಸಿದ್ದಾರೆ.
ಘಟನೆ ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂದು ಬೊಲಂಜೀರ್ ಎಸ್ಪಿ ಖಿಲಾರಿ ಹೃಷಿಕೇಶ್ ಧ್ಯಾನದೇವ್ ಹೇಳಿದ್ದಾರೆ. ಆರೋಪಿಯ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಆತನನ್ನು ಶೀಘ್ರವೇ ಬಂಧಿಸುವ ವಿಶ್ವಾಸವಿದೆ ಎಂದು ಸ್ಪಷ್ಟಪಡಿಸಿದ್ದಾರೆ.