EBM News Kannada
Leading News Portal in Kannada

ಭಾರತ-ಆಸ್ಟ್ರೇಲಿಯ ಟೆಸ್ಟ್ ಸರಣಿ | ಡಬ್ಲ್ಯುಟಿಸಿ ಫೈನಲ್‌ ಮೇಲೆ ಭಾರತದ ಕಣ್ಣು | India-Australia Test Series

0


ಹೊಸದಿಲ್ಲಿ, ನ.19: ನ್ಯೂಝಿಲ್ಯಾಂಡ್ ವಿರುದ್ಧ ಸ್ವದೇಶದಲ್ಲಿ 0-3 ಅಂತರದಿಂದ ವೈಟ್‌ವಾಶ್ ಮುಖಭಂಗಕ್ಕೆ ಒಳಗಾದ ನಂತರ ಮುಂಬರುವ ಆಸ್ಟ್ರೇಲಿಯ ಪ್ರವಾಸವು ಭಾರತ ಕ್ರಿಕೆಟ್ ತಂಡದ ಪಾಲಿಗೆ ಅತ್ಯಂತ ಮುಖ್ಯವಾಗಿದೆ.

ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 4-0 ಇಲ್ಲವೇ 5-0 ಅಂತರದಿಂದ ಅಭೂತಪೂರ್ವ ಜಯ ಸಾಧಿಸಿದರೆ ಮಾತ್ರ ಭಾರತ ತಂಡವು ಇತರ ಟೆಸ್ಟ್ ಸರಣಿಯ ಫಲಿತಾಂಶವನ್ನು ಅವಲಂಬಿಸದೆ 2025ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಬಹುದು. ಆಸ್ಟ್ರೇಲಿಯ ತಂಡವು ಲಂಡನ್‌ನ ದಿ ಓವಲ್‌ನಲ್ಲಿ ನಡೆದಿರುವ 2023ರ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಭಾರತವನ್ನು ಮಣಿಸಿತ್ತು.

ಭಾರತ ತಂಡವು ಈ ಬಾರಿಯೂ ಟೆಸ್ಟ್ ಸರಣಿಯಲ್ಲಿ ಗೆಲುವು ದಾಖಲಿಸಿದರೆ ಆಸ್ಟ್ರೇಲಿಯ ನೆಲದಲ್ಲಿ ಹ್ಯಾಟ್ರಿಕ್ ಸರಣಿ ಗೆದ್ದಂತಾಗುತ್ತದೆ.

ಟೀಮ್ ಇಂಡಿಯಾವು ಆಸ್ಟ್ರೇಲಿಯದಲ್ಲಿ 2018-19ರ ಬಾರ್ಡರ್-ಗವಾಸ್ಕರ್ ಟ್ರೋಫಿ(ಬಿಜಿಟಿ)ಸರಣಿಯನ್ನು ಗೆದ್ದಿತ್ತು. ಬಹುತೇಕ ಅಡೆತಡೆಗಳನ್ನು ಮೀರಿ 2020-21ರಲ್ಲಿ ಆಸ್ಟ್ರೇಲಿಯದಲ್ಲಿ ಮತ್ತೊಂದು ಸರಣಿಯನ್ನು ಜಯಿಸಿತ್ತು.

ಈ ಎರಡು ಸರಣಿ ಗೆಲುವಿನಲ್ಲಿ ಕೆಲವು ಪ್ರಮುಖ ಸಾಮ್ಯತೆಗಳಿವೆ. ಈ ಎರಡು ಸರಣಿಗಳನ್ನು ಭಾರತವು 2-1 ಅಂತರದಿಂದ ಗೆದ್ದುಕೊಂಡಿದೆ. ಭಾರತವು ಮೆಲ್ಬರ್ನ್‌ನ ಎಂಸಿಜಿಯಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಜಯಿಸಿತ್ತು. ಸಿಡ್ನಿಯ ಎಸ್‌ಸಿಜಿಯಲ್ಲಿ ಹೊಸ ವರ್ಷದ ಟೆಸ್ಟ್ ಪಂದ್ಯವನ್ನು ಡ್ರಾಗೊಳಿಸಿತ್ತು.

ಭಾರತ ತಂಡವು 1947ರಿಂದ ಟೆಸ್ಟ್ ಪಂದ್ಯಗಳನ್ನು ಆಡಲು ಆಸ್ಟ್ರೇಲಿಯಕ್ಕೆ ಪ್ರವಾಸ ಕೈಗೊಳ್ಳುತ್ತಿದೆ. ಆಗ ತಂಡದ ಅದೃಷ್ಟ ಅದರ ಪರವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ 2019 ಹಾಗೂ 2021ರ ಸರಣಿ ಗೆಲುವು ಭಾರತೀಯ ಆಟಗಾರರು ಹಾಗೂ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅತ್ಯಂತ ವಿಶೇಷವಾಗಿದೆ.

ಗಾಬಾ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತವು 1988ರ ನಂತರ ಆ ಮೈದಾನದಲ್ಲಿ ಆಸ್ಟ್ರೇಲಿಯವನ್ನು ಮಣಿಸಿದ ಮೊದಲ ತಂಡ ಎನಿಸಿಕೊಂಡಿತ್ತು. ಈ ಸಾಧನೆ ಮಾಡಿದ ಏಶ್ಯದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಆಸ್ಟ್ರೇಲಿಯ ತಂಡವು 2004ರಲ್ಲಿ ಮಾತ್ರ ಭಾರತದಲ್ಲಿ ಬಿಜಿಟಿಯಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿತ್ತು. 1969-70ರಲ್ಲಿ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿತ್ತು.

ಉಭಯ ತಂಡಗಳು 1986ರಲ್ಲಿ ಚೆನ್ನೈನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯವನ್ನು ಟೈಗೊಳಿಸಿ ಇತಿಹಾಸ ನಿರ್ಮಿಸಿದ್ದವು.

ಮುಂಬರುವ ಸರಣಿಯು ಬಾರ್ಡರ್-ಗವಾಸ್ಕರ್ ಯುಗದಲ್ಲಿ ಆಸ್ಟ್ರೇಲಿಯ ನೆಲದಲ್ಲಿ ಭಾರತ ತಂಡ ಆಡುತ್ತಿರುವ ಮೊತ್ತ ಮೊದಲ 5 ಪಂದ್ಯಗಳ ಟೆಸ್ಟ್ ಸರಣಿಯಾಗಿದೆ.

ಈ ಎರಡು ತಂಡಗಳ ನಡುವಿನ ಸರಣಿಗೆ 1996ರಲ್ಲಿ ಬಾರ್ಡರ್-ಗವಾಸ್ಕರ್ ಸರಣಿ ಎಂದು ಹೆಸರಿಡಲಾಗಿತ್ತು. ಆಗ ಆಸ್ಟ್ರೇಲಿಯವು ಭಾರತದಲ್ಲಿ ಏಕೈಕ ಟೆಸ್ಟ್ ಪಂದ್ಯ ಆಡಿತ್ತು.

ಉಭಯ ದೇಶಗಳ ಇಬ್ಬರು ಕ್ರಿಕೆಟ್ ದಂತಕತೆಗಳಾದ ಅಲನ್ ಬಾರ್ಡರ್ ಹಾಗೂ ಸುನೀಲ್ ಗವಾಸ್ಕರ್ ಹೆಸರನ್ನು ಟೆಸ್ಟ್ ಸರಣಿಗೆ ಇಡಲಾಗಿದೆ.

*ಭಾರತ-ಆಸ್ಟ್ರೇಲಿಯ ಟೆಸ್ಟ್ ದಾಖಲೆಗಳು:

ಆಡಿರುವ ಪಂದ್ಯಗಳು: 107

ಭಾರತ ಗೆದ್ದಿರುವ ಪಂದ್ಯಗಳು: 45

ಆಸ್ಟ್ರೇಲಿಯ ಗೆದ್ದಿರುವ ಪಂದ್ಯಗಳು: 32

ಡ್ರಾ ಆದ ಪಂದ್ಯಗಳು: 29

ಪಂದ್ಯ ಟೈ: 1

ಗರಿಷ್ಠ ರನ್ ಸ್ಕೋರರ್: ಸಚಿನ್ ತೆಂಡುಲ್ಕರ್(3,630 ರನ್)(ಗರಿಷ್ಠ ಸ್ಕೋರ್:241)

ಶ್ರೇಷ್ಠ ವೈಯಕ್ತಿಕ ಸ್ಕೋರ್: ಮೈಕಲ್ ಕ್ಲಾರ್ಕ್ ಔಟಾಗದೆ 329(2012ರಲ್ಲಿ)

ಗರಿಷ್ಠ ಶತಕಗಳು: ಸಚಿನ್ ತೆಂಡುಲ್ಕರ್(11 ಶತಕಗಳು)

ಇನಿಂಗ್ಸ್‌ನಲ್ಲಿ ಶ್ರೇಷ್ಠ ಬೌಲಿಂಗ್: ಜಸುಭಾಯ್ ಪಟೇಲ್-9/69(1959ರಲ್ಲಿ)

ಗರಿಷ್ಠ ವಿಕೆಟ್ ಪಡೆದ ಬೌಲರ್: ನಾಥನ್ ಲಿಯೊನ್(121 ವಿಕೆಟ್‌ಗಳು)

ನಾಯಕನಾಗಿ ಗರಿಷ್ಠ ಪಂದ್ಯಗಳನ್ನಾಡಿದ ಆಟಗಾರ: ಎಂ.ಎಸ್.ಧೋನಿ(13 ಪಂದ್ಯಗಳು, 2008ರಿಂದ 2013ರ ತನಕ)

Leave A Reply

Your email address will not be published.