ಮಾಸ್ಕೋ : ರಶ್ಯದ ವಿರುದ್ಧ ಅಮೆರಿಕದ ದೀರ್ಘಶ್ರೇಣಿಯ ಶಸ್ತ್ರಾಸ್ತ್ರ ಬಳಕೆಯ ಮೇಲಿದ್ದ ನಿಷೇಧ ತೆರವುಗೊಂಡ ಬೆನ್ನಲ್ಲೇ ಉಕ್ರೇನ್ ಅಮೆರಿಕ ನಿರ್ಮಿತ 6 ಎಟಿಎಸಿಎಂಎಸ್ ಕ್ಷಿಪಣಿಗಳನ್ನು ರಶ್ಯದ ಬ್ರಿಯಾಂಸ್ಕ್ ಪ್ರದೇಶದತ್ತ ಪ್ರಯೋಗಿಸಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಮಂಗಳವಾರ ಹೇಳಿದೆ.
ಎಲ್ಲಾ `ಆರ್ಮಿ ಟ್ಯಾಕ್ಟಿಕಲ್ ಮಿಸೈಲ್ ಸಿಸ್ಟಮ್ಸ್(ಎಟಿಎಸಿಎಂಎಸ್) ಕ್ಷಿಪಣಿಗಳನ್ನೂ ಹೊಡೆದುರುಳಿಸಲಾಗಿದೆ. ಧ್ವಂಸಗೊಂಡ ಕ್ಷಿಪಣಿಯ ಚೂರು ಸೇನಾನೆಲೆಯ ಮೇಲೆ ಬಿದ್ದು ಬೆಂಕಿ ಕಾಣಿಸಿಕೊಂಡಿದೆ ಎಂದು ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ದಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಬ್ರಿಯಾಂಸ್ಕ್ ಪ್ರದೇಶದ ಮಿಲಿಟರಿ ಆಯುಧ ಡಿಪೋದ ಮೇಲೆ ಸೋಮವಾರ ತಡರಾತ್ರಿ ದಾಳಿ ನಡೆಸಿದ್ದು ಈ ಪ್ರದೇಶದಲ್ಲಿ ಹಲವು ಸ್ಫೋಟಗಳು ಸಂಭವಿಸಿದೆ ಎಂದು ಉಕ್ರೇನ್ ಹೇಳಿದೆ.