EBM News Kannada
Leading News Portal in Kannada

ಗ್ರಾಮೀಣ ಪ್ರದೇಶದಲ್ಲಿ ಟೆಲಿಮೆಡಿಸಿನ್, ಟೆಲಿ-ಐಸಿಯುಗಳತ್ತ ಚಿತ್ತ : ಸಚಿವ ದಿನೇಶ್ ಗುಂಡೂರಾವ್

0


ಬೆಂಗಳೂರು : ಗ್ರಾಮೀಣ ಪ್ರದೇಶಗಳಲ್ಲಿ ಎಐ, ಟೆಲಿಮೆಡಿಸಿನ್, ಟೆಲಿ ಐಸಿಯುಗಳ ಮೂಲಕ ಅತ್ಯಾಧುನಿಕ ಗುಣಮಟ್ಟದ ಆರೋಗ್ಯ ಸೇವೆ ನೀಡುವತ್ತ ನಮ್ಮ ಸರಕಾರ ಚಿತ್ತ ಹರಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಮಂಗಳವಾರ ನಗರದ ಅರಮನೆ ಆವರಣದಲ್ಲಿ ಆಯೋಜಿಸಿರುವ ಬೆಂಗಳೂರು ಟೆಕ್ ಸಮ್ಮಿಟ್‍ನಲ್ಲಿ ಸ್ಟಾರ್ಟ್‌ಅಪ್ ಸ್ಪ್ರಿಂಗ್ ಬೋರ್ಡ್ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆರೋಗ್ಯ ಕ್ಷೇತ್ರವನ್ನು ಸುಧಾರಿಸುವಲ್ಲಿ ತಂತ್ರಜ್ಞಾನದ ಪಾತ್ರ ಹೆಚ್ಚಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉತ್ಕೃಷ್ಟ ಗುಣಮಟ್ಟದ ಆರೋಗ್ಯ ಸೇವೆಯ ಅಗತ್ಯತೆ ಇದೆ. ಈ ಕಾರಣಕ್ಕಾಗಿ ಎಐ, ಟೆಲಿಮೆಡಿಸಿನ್ ಮತ್ತು ಟೆಲಿ-ಐಸಿಯುಗಳ ಸಮರ್ಪಕ ಬಳಕೆಯೊಂದಿಗೆ ಅತ್ಯಾಧುನಿಕ ಆರೋಗ್ಯ ಸೇವೆ ನೀಡಲು ನಮ್ಮ ಸರಕಾರ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು.

ಲೆಟ್ಸ್ ವೆಂಚರ್‌ ನ ಸಂಸ್ಥಾಪಕಿ ಶಾಂತಿ ಮೋಹನ್ ಮಾತನಾಡಿ, ಸ್ಟಾರ್ಟ್‌ಅಪ್ ಗಳು ಮತ್ತು ಉದ್ಯಮದ ಅಗತ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸ್ಟಾರ್ಟ್‌ಅಪ್ ಗಳು ತಜ್ಞರೊಂದಿಗೆ ಸಂಪರ್ಕಿಸಿ ಮಾರ್ಗದರ್ಶನವನ್ನು ಪಡೆಯಲು ಹಾಗೂ ಆರ್ಥಿಕ ನೆರವು ಪಡೆಯಲು ಇದು ವೇದಿಕೆಯಾಗಿದೆ ಎಂದು ಹೇಳಿದರು.

ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿ ಡಾ.ಏಕರೂಪ್ ಕೌರ್ ಮಾತನಾಡಿ, ರಾಜ್ಯದಲ್ಲಿ ನವೀನ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಒತ್ತು ನೀಡುವುದರ ಜೊತೆಗೆ ಉದ್ಯೋಗ ಸೃಷ್ಟಿಸುವ ಗುರಿಯನ್ನು ಹೊಂದಿದ್ದೇವೆ. ಕ್ವಾಂಟಮ್ ಎಐ, ಹವಾಮಾನ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ತಂತ್ರಜ್ಞಾನದ ಆವಿಷ್ಕಾರಗಳ ಮೇಲೆ ಕೇಂದ್ರೀಕರಿಸಲು ಇನ್ನೋವೇಟಿವ್ ಕ್ಯಾಂಪಸ್ ಅನ್ನು ಉತ್ತೇಜಿಸುತ್ತಿದ್ದೇವೆ ಎಂದು ಹೇಳಿದರು.

ಇದು ಸ್ಟಾರ್ಟ್‌ಅಪ್ ಗಳು, ಕಾರ್ಪೊರೇಷನ್‍ಗಳು ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ನೆರವಾಗುತ್ತದೆ. ಈ ಶೃಂಗಸಭೆಯಲ್ಲಿ 100 ಕ್ಕೂ ಹೆಚ್ಚು ಹೂಡಿಕೆದಾರರು ಮತ್ತು 200 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಭಾಗವಹಿಸುತ್ತಿದ್ದು, ಸ್ಟಾರ್ಟ್‌ಅಪ್ ಗಳಿಗೆ ಅನುಭವಿ ತಜ್ಞರಿಂದ ಮಾರ್ಗದರ್ಶನ ಬಂಡವಾಳ ಹೂಡಿಕೆ ಲಭಿಸಲಿದೆ. ಸರಕಾರವು 2025 ರಲ್ಲಿ ಸ್ಟಾರ್ಟ್‌ಅಪ್ ಪ್ರಶಸ್ತಿಗಳನ್ನು ನೀಡಲು ನಿಧರ್ರಿಸಿದೆ. ಈ ಶೃಂಗಸಭೆ ಮೂಲಕ ರಾಜ್ಯದ ಸ್ಟಾರ್ಟ್‌ಅಪ್ ಗಳ ಬಲವರ್ಧನೆಗೆ ಕ್ರಮ ವಹಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಐಟಿ,ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇ ಗೌಡ ಸೇರಿದಂತೆ ಸಮಿತಿಯ ಪ್ರಮುಖ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡು ವಿಚಾರ ಮಂಡಿಸಿದರು.

Leave A Reply

Your email address will not be published.