ಹೊಸದಿಲ್ಲಿ: ಮಂಗಳವಾರ ದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟವಾದ ಹೊಗೆ ಆವರಿಸಿದ್ದು, ಗಾಳಿಯ ಗುಣಮಟ್ಟವು ಸುಮಾರು 500ರ ಗಡಿಯನ್ನು ತಲುಪಿದೆ.
ಸಿಸ್ಟಂ ಆಫ್ ಏರ್ ಕ್ವಾಲಿಟಿ ಮತ್ತು ವೆದರ್ ಫೋರ್ಕಾಸ್ಟಿಂಗ್ ಮತ್ತು ರಿಸರ್ಚ್(SAFAR) ಅಂಕಿ-ಅಂಶಗಳ ಪ್ರಕಾರ, ದಿಲ್ಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕವು(AQI) 6ಗಂಟೆ ವೇಳೆ 494 ತಲುಪಿತ್ತು. ದಿಲ್ಲಿಯಲ್ಲಿನ 35 ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳಲ್ಲಿ ಹೆಚ್ಚಿನ ಕೇಂದ್ರಗಳಲ್ಲಿ 500 AQI ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ ದಟ್ಟವಾದ ಮಂಜಿನ ಹಿನ್ನೆಲೆ ದಿಲ್ಲಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ದಟ್ಟವಾದ ಹೊಗೆ ಆವರಿಸಿದ್ದರಿಂದ ಗೋಚರತೆ ಸಮಸ್ಯೆ ಎದುರಾಗಿ ಹಲವಾರು ರೈಲುಗಳು ಮತ್ತು ವಿಮಾನಗಳ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಕನಿಷ್ಠ 22 ರೈಲುಗಳ ಸಂಚಾರ ತಡವಾಗಿದ್ದು, 8 ವಿಮಾನಗಳ ಲ್ಯಾಂಡಿಂಗ್ ಸ್ಥಳವನ್ನು ಬದಲಾಯಿಸಲಾಗಿದೆ.
ತೀವ್ರ ವಾಯುಮಾಲಿನ್ಯ ಮತ್ತು ಅಪಾಯಕಾರಿ ಎಕ್ಯೂಐ ಮಟ್ಟದಿಂದಾಗಿ ದಿಲ್ಲಿಯಾದ್ಯಂತ ಶಾಲೆಗಳನ್ನು ಮುಚ್ಚಲಾಗಿದೆ. 12ನೇ ತರಗತಿವರೆಗಿನ ಎಲ್ಲಾ ದೈಹಿಕ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಎಲ್ಲಾ ಅಧ್ಯಯನಗಳನ್ನು ಆನ್ ಲೈನ್ ಗೆ ವರ್ಗಾಯಿಸಲಾಗುತ್ತಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅತಿಶಿ ಹೇಳಿದ್ದಾರೆ.
ಈ ಮಧ್ಯೆ ದಿಲ್ಲಿ ವಿಶ್ವವಿದ್ಯಾನಿಲಯವು ನವೆಂಬರ್ 23ರವರೆಗೆ ಆನ್ಲೈನ್ ತರಗತಿಗಳನ್ನು ನಡೆಸುವುದಾಗಿ ಘೋಷಿಸಿದೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯವು ನವೆಂಬರ್ 22ರವರೆಗೆ ಆನ್ ಲೈನ್ ತರಗತಿಗಳನ್ನು ಮಾಡುವುದಾಗಿ ಹೇಳಿಕೊಂಡಿದೆ.