EBM News Kannada
Leading News Portal in Kannada

ಕಾಂಗ್ರೆಸ್ ಶಾಸಕರಿಗೆ 100 ಕೋಟಿ ರೂ.ಆಫರ್ ನೀಡಿದ ದಾಖಲೆ ಬಿಡುಗಡೆ ಮಾಡಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸವಾಲು

0


ಹುಬ್ಬಳ್ಳಿ: ಕಾಂಗ್ರೆಸ್ ಶಾಸಕರಿಗೆ ಯಾರು 100 ಕೋಟಿ ರೂ.ಆಫರ್ ಕೊಟ್ಟಿದ್ದಾರೆ? ಎಂಬುದರ ಬಗ್ಗೆ ಮೊದಲು ದಾಖಲೆ ಬಿಡುಗಡೆ ಮಾಡುವಂತೆ ಕಾಂಗ್ರೆಸ್ ನಾಯಕರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸವಾಲು ಹಾಕಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬರೀ ಬಾಯಿ ಮಾತಿನಲ್ಲಿ ಹೇಳಬೇಡಿ. ಯಾವ ಬಿಜೆಪಿ ನಾಯಕರು ಆಫರ್ ಕೊಟ್ಟಿದ್ದಾರೆ? ಎಂಬ ಬಗ್ಗೆ ಮೊದಲು ದಾಖಲೆ ನೀಡಿ ನೋಡೋಣ ಎಂದು ಹೇಳಿದರು.

100 ಕೋಟಿ ಇರಲಿ, 500 ಕೋಟಿ ಆಫರ್ ಇರಲಿ ದಾಖಲೆ ಇದ್ದರೆ ಬಿಡುಗಡೆ ಮಾಡಿ. ನಿಮ್ಮನ್ನು ಯಾರೂ ತಡೆದಿಲ್ಲ. ಶಾಸಕ ರವಿ ಗಾಣಿಗ ಅವತ್ತಿನಿಂದ ಹೇಳುತ್ತಿದ್ದಾರೆ. ಆದರೆ ಇನ್ನೂ ಏಕೆ ದಾಖಲೆ ಬಿಡುಗಡೆ ಮಾಡುತ್ತಿಲ್ಲ? ಎಂದು ಪ್ರಹ್ಲಾದ್ ಜೋಶಿ ಪ್ರಶ್ನಿಸಿದರು.

ಕಾಂಗ್ರೆಸ್ ಶಾಸಕರಿಗೆ ಯಾರೂ 50 ಕೋಟಿ, 100 ಕೋಟಿ, 500 ಕೋಟಿ ಆಫರ್ ಎಂದೆಲ್ಲಾ ಮಾತನಾಡಿದ್ದಾರೋ ಅವರ ಮೇಲೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿದೆ ಎಂದ ಅವರು, ಹಿಂದೆ ಬಿಜೆಪಿ ಸರಕಾರ ರಚಿಸುವಾಗ ಇದೇ ಸಿದ್ದರಾಮಯ್ಯ ತಮ್ಮ ಆಪ್ತ ಶಾಸಕರನ್ನು ಬಿಜೆಪಿಗೆ ಕಳುಹಿಸಿದ್ದರು ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ಜತೆ ಸರಕಾರ ರಚನೆ ಇಷ್ಟವಿರಲಿಲ್ಲ. ಹಾಗಾಗಿ ತಾವೇ ಮುಂದೆ ನಿಂತು ಕೆಲ ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಕಳುಸಿದ್ದರು. ಕಳೆದ ಬಾರಿ ಅಪರೇಷನ್ ಕಮಲ ನಡೆಸಲು ಕಾರಣ ರಾಜ್ಯದಲ್ಲಿ ಅತಂತ್ರ ಸ್ಥಿತಿಯತ್ತು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಜನ ಕಾಂಗ್ರೆಸ್ ಗೆ ಬಹುಮತದ ಅಧಿಕಾರ ಕೊಟ್ಟಿದ್ದಾರೆ. ಹಾಗಿದ್ದಾಗ ನಾವೇಕೆ ಮೂಗು ತೂರಿಸೋಣ? ಎಂದು ಅವರು ಹೇಳಿದರು.

5 ವರ್ಷ ವಿಪಕ್ಷದಲ್ಲಿ ಬಿಜೆಪಿ: ರಾಜ್ಯದಲ್ಲಿ 5 ವರ್ಷ ವಿರೋಧ ಪಕ್ಷ ಸ್ಥಾನದಲ್ಲಿ ಇರಲು ಬಿಜೆಪಿ ಸ್ಪಷ್ಟ ನಿಲುವು ತೋರಿದೆ. ವಿಪಕ್ಷದಲ್ಲಿದ್ದು ಜನಪರವಾಗಿ ರಚನಾತ್ಮಕ ಕಾರ್ಯ ಕೈಗೊಳ್ಳುವಂತೆ ನಮ್ಮ ಹೈಕಮಾಂಡ್ ರಾಜ್ಯ ನಾಯಕರಿಗೆ ನಿರ್ದೇಶನ ನೀಡಿದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

ಹಗರಣಗಳಲ್ಲಿ ಸಿಲುಕಿರುವ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಕೋರ್ಟ್ ಸ್ಪಷ್ಟ ತೀರ್ಪು ನೀಡಿದೆ. ಅದರಂತೆ ಲೋಕಾಯುಕ್ತ ವಿಚಾರಣೆ ನಡೆದಿದೆ. ಇದೆಲ್ಲದರ ಬಗ್ಗೆ ಹಾದಿ ತಪ್ಪಿಸಲು ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ಸಿಗರು ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ ಎಂದು ಅವರು ದೂರಿದರು.

Leave A Reply

Your email address will not be published.