ಹೊಸದಿಲ್ಲಿ: ಖ್ಯಾತ ಜಾನಪದ ಗಾಯಕಿ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಶಾರದಾ ಸಿನ್ಹಾ ನಿಧನರಾಗಿದ್ದಾರೆ.
ಶಾರದಾ ಸಿನ್ಹಾ(72) ಕಳೆದ ಹಲವು ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಅವರನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ನೀಡಲಾಗಿತ್ತು.
ಶಾರದಾ ಸಿನ್ಹಾ ಅವರ ನಿಧನದ ಬಗ್ಗೆ ಪುತ್ರ ಅಂಶುಮಾನ್ ಮಾಹಿತಿ ನೀಡಿದ್ದು, ತಾಯಿಯು ನಮ್ಮನ್ನು ಅಗಲಿದ್ದಾರೆ. ಅವರು ಸದಾ ಜನರ ಹೃದಯದಲ್ಲಿ ಇರುತ್ತಾರೆ. ಬುಧವಾರ ಪಾಟ್ನಾದಲ್ಲಿ ಅಂತಿಮ ವಿಧಿ ವಿಧಾನ ನಡೆಯಲಿದೆ ಎಂದು ಹೇಳಿದ್ದಾರೆ.
ಶಾರದಾ ಅವರನ್ನು ಅಭಿಮಾನಿಗಳು ‘ಬಿಹಾರಿ ಕೋಕಿಲಾ’ ಎಂದು ಕರೆಯುತ್ತಿದ್ದರು. ಶಾರದಾ ಅವರು ಭೋಜಪುರಿ, ಮೈಥಿಲಿ ಭಾಷೆಯ ಜನಪದ ಗೀತೆಗಳನ್ನು ಹಾಡುತ್ತಿದ್ದರು. ಶಾರದಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಖ್ಯಾತ ಗಾಯಕ ಸೋನು ನಿಗಮ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಕೆಲ್ವಾ ಕೆ ಪಾಟ್ ಪರ್ ಉಗಳನ್ ಸೂರಜ್ ಮಾಲ್ ಝಾಕೆ ಜುಕೆ, ಹೇ ಛತಿ ಮೈಯಾ, ಹೋ ದೀನನಾಥ್, ಬಹಂಗಿ ಲಚಕಟ್ ಜಾಯೆ, ರೋಜೆ ರೋಜೆ ಉಗೇಲಾ, ಸುನಾ ಛಾತಿ ಮಾಯ್, ಜೋಡೆ ಜೋಡೆ ಸುಪಾವಾ ಮತ್ತು ಪಾಟ್ನಾ ಕೆ ಘಾಟ್ ಪರ್ ಅವರ ಅತ್ಯಂತ ಜನಪ್ರಿಯ ಹಾಡುಗಳಾಗಿದೆ. 2018ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು.