ಗಾಝಾ: ಉತ್ತರ ಗಾಝಾದ ಪ್ರದೇಶಗಳಿಗೆ ಔಷಧ ಮತ್ತು ಆಹಾರ ನೆರವನ್ನು ತಲುಪಿಸಲು ಈಗಲೂ ಇಸ್ರೇಲ್ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ ಎಂದು ಫೆಲೆಸ್ತೀನ್ ನಿರಾಶ್ರಿತರಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಏಜೆನ್ಸಿಯ (ಯುಎನ್ಆರ್ಡಬ್ಲ್ಯೂಎ) ಮುಖ್ಯಸ್ಥ ಫಿಲಿಪ್ ಲಝಾರಿನಿ ಹೇಳಿದ್ದಾರೆ.
ದಾಳಿಗೆ ಒಳಗಾದ ಆಸ್ಪತ್ರೆಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ ಮತ್ತು ಗಾಯಗೊಂಡ ಜನರಿಗೆ ಚಿಕಿತ್ಸೆ ದೊರಕುತ್ತಿಲ್ಲ. ಉತ್ತರ ಗಾಝಾದಲ್ಲಿ ಯುಎನ್ಆರ್ಡಬ್ಲ್ಯೂಎ ನಿರ್ವಹಿಸುತ್ತಿರುವ ಆಶ್ರಯ ತಾಣಗಳು ಕಿಕ್ಕಿರಿದು ತುಂಬಿದ್ದು ಕೆಲವು ಸ್ಥಳಾಂತರಿತ ಜನರು ಶೌಚಾಲಯದಲ್ಲಿ ಬದುಕುವ ಅನಿವಾರ್ಯತೆ ಎದುರಾಗಿದೆ. ವರದಿಗಳ ಪ್ರಕಾರ, ಕುಸಿದು ಬಿದ್ದ ಕಟ್ಟಡಗಳ ಅವಶೇಷಗಳಡಿಯಿಂದ ಜನರ ರಕ್ಷಣಾ ಕಾರ್ಯಾಚರಣೆಗೂ ಅವಕಾಶ ನೀಡುತ್ತಿಲ್ಲ’ ಎಂದು ಅವರು ಹೇಳಿದ್ದಾರೆ.
ಯುಎನ್ಆರ್ಡಬ್ಲ್ಯೂ ಸೇರಿದಂತೆ ಮಾನವೀಯ ಏಜೆನ್ಸಿಗಳು ಉತ್ತರ ಗಾಝಾ ಪ್ರವೇಶಿಸಲು ಅವಕಾಶವಿರಬೇಕು. ಮಿಲಿಟರಿ ಉದ್ದೇಶ ಸಾಧಿಸಲು ಮಾನವೀಯ ನೆರವಿನ ನಿರಾಕರಣೆ ಮತ್ತು ಮಾನವೀಯ ನೆರವನ್ನು ಆಯುಧವನ್ನಾಗಿಸುವುದು ನೈತಿಕ ದಿಕ್ಸೂಚಿ ಕನಿಷ್ಟ ಮಟ್ಟಕ್ಕೆ ಇಳಿದಿರುವುದರ ದ್ಯೋತಕವಾಗಿದೆ. ಫೆಲೆಸ್ತೀನ್ ಪ್ರದೇಶದಲ್ಲಿ ಇರುವ ಎಲ್ಲರನ್ನೂ (ಮಕ್ಕಳು, ಹಮಾಸ್ನ ಒತ್ತೆಸೆರೆಯಲ್ಲಿ ಇರುವವರು ಸೇರಿದಂತೆ) ಮಾನವೀಯ ನೆರವು ತಲುಪುವಂತಾಗಬೇಕು. ಕದನ ವಿರಾಮವು ಈ ಅಂತ್ಯವಿಲ್ಲದ ದುಃಸ್ವಪ್ನವನ್ನು ಕೊನೆಗೊಳಿಸುವ ಪ್ರಾರಂಭವಾಗಿದೆ’ ಎಂದು ಲಝಾರಿನಿ ಹೇಳಿದ್ದಾರೆ.