EBM News Kannada
Leading News Portal in Kannada

ವಿವಾನ್‌ಗೆ ಬೆಳ್ಳಿ; ಅನಂತ್‌ಜೀತ್‌ಗೆ ಕಂಚು

0


PC : PTI 

ಹೊಸದಿಲ್ಲಿ: ಹೊಸದಿಲ್ಲಿಯ ತುಘಲಕಾಬಾದ್‌ನಲ್ಲಿರುವ ಡಾ. ಕರ್ಣಿ ಸಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ ಫೈನಲ್ ಪಂದ್ಯಾವಳಿಯಲ್ಲಿ ಗುರುವಾರ ಭಾರತದ ವಿವಾನ್ ಕಪೂರ್ ಟ್ರ್ಯಾಪ್ ವಿಭಾಗದಲ್ಲಿ ಬೆಳ್ಳಿ ಪಡೆದರೆ, ಅನಂತ್‌ಜೀತ್ ಸಿಂಗ್ ನರುಕ ಸ್ಕೀಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಇದರೊಂದಿಗೆ ಈ ಪಂದ್ಯಾವಳಿಯಲ್ಲಿ ಭಾರತ ಗೆದ್ದಿರುವ ಪದಕಗಳ ಸಂಖ್ಯೆ ನಾಲ್ಕಕ್ಕೇರಿದೆ.

ಈಗಾಗಲೇ ಭಾರತದ ಸೋನಮ್ ಮಸ್ಕರ್ ಮತ್ತು ಅಖಿಲ್ ಶೆವರಾನ್ ಪಿಸ್ತೂಲ್ ವಿಭಾಗದಲ್ಲಿ ಬೆಳ್ಳಿ ಮತ್ತು ರೈಫಲ್ ವಿಭಾಗದಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಶ್ರೇಷ್ಠ ಪ್ರಯತ್ನಗಳ ಹೊರತಾಗಿಯೂ, 22 ವರ್ಷದ ವಿವಾನ್‌ರಿಗೆ ಚಿನ್ನ ಗೆಲ್ಲಲು ಸಾಧ್ಯವಾಗಲಿಲ್ಲ. ಒಲಿಂಪಿಕ್ ಚಿನ್ನವನ್ನು ಗೆಲ್ಲುವ ನನ್ನ ಕನಸನ್ನು ನನಸು ಮಾಡಲು ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಎಂದು ಅವರು ಹೇಳಿದರು. ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇರಿಸಿ, ಮೂರು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ನನ್ನನ್ನು ಜಾಗತಿಕ ಮಟ್ಟದ ಸ್ಪರ್ಧೆಗೆ ಅಣಿಗೊಳಿಸಿದ ಮಾಜಿ ವಿಶ್ವ ಚಾಂಪಿಯನ್ ಕುವೈತ್‌ನ ಖಾಲಿದ್ ಅಲ್ ಮುದಫ್‌ರಿಗೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.

ಒಲಿಂಪಿಕ್ ಬೆಳ್ಳಿ ವಿಜೇತ ಕಿ ಯಿಂಗ್ ಚಿನ್ನ ಗೆದ್ದರು.

ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದಿರುವ ಅನಂತ್‌ಜೀತ್, ಅರ್ಹತಾ ಸುತ್ತಿನಲ್ಲಿ ಅಗ್ರ ಸ್ಥಾನಿಯಾಗಿದ್ದ ಖತರ್‌ನ ರಶ್ದ್ ಸಾಲಿಹ್ ಅಲ್-ಅತ್ಬರನ್ನು ಹಿಂದಿಕ್ಕಿ ಕಂಚು ಗೆದ್ದರು. ಇಟಲಿಯವರಾದ ಟಮಾರೊ ಕಸಾಂಡ್ರೊ ಮತ್ತು ಗೇಬ್ರಿಯಲ್ ರೊಸೆಟಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಪಡೆದರು.

ಮಹಿಳೆಯರ ಸ್ಕೀಟ್‌ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಭಾರತದ ಗನೆಮತ್ ಸೆಖೋನ್ ಆರನೇ ಸ್ಥಾನಕ್ಕೆ ಜಾರಿದರು. ಅಮೆರಿಕದ ಸಮಂತಾ ಸೈಮನ್‌ಟನ್ ಚಿನ್ನ ಪಡೆದರೆ, ಇಟಲಿಯ ಡಯಾನಾ ಬಕೋಸಿ ಬೆಳ್ಳಿ ಗೆದ್ದರು.

ಮೂರು ದಿನಗಳ ಪಂದ್ಯಾವಳಿಯು ಗುರುವಾರ ಮುಕ್ತಾಯಗೊಂಡಿದೆ. ಐದು ಚಿನ್ನ ಮತ್ತು ಮೂರು ಕಂಚಿನ ಪದಕಗಳನ್ನು ಪಡೆದಿರುವ ಚೀನಾ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಒಂದು ಚಿನ್ನ, ಮೂರು ಬೆಳ್ಳಿ ಮತ್ತು ಒಂದು ಕಂಚಿನ ಪದಕಗಳೊಂದಿಗೆ ಇಟಲಿ ಎರಡನೇ ಸ್ಥಾನದಲ್ಲಿದೆ. ಜರ್ಮನಿ, ಫ್ರಾನ್ಸ್, ಹಂಗೇರಿ, ಡೆನ್ಮಾರ್ಕ್, ಸ್ಯಾನ ಮರಿನೊ ಮತ್ತು ಅಮೆರಿಕ ಕನಿಷ್ಠ ಒಂದು ಚಿನ್ನವನ್ನಾದರೂ ಪಡೆದ ದೇಶಗಳ ಪಟ್ಟಿಯಲ್ಲಿವೆ. ಎರಡು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳೊಂದಿಗೆ ಭಾರತ 9ನೇ ಸ್ಥಾನದಲ್ಲಿ ತೃಪ್ತಿ ಕಂಡಿದೆ. 14 ದೇಶಗಳು ಪದಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

Leave A Reply

Your email address will not be published.