ಇಂದೋರ್ : ನಾಯಕ ಶುಭಮ್ ಶರ್ಮಾ(ಔಟಾಗದೆ 143, 243 ಎಸೆತ, 13 ಬೌಂಡರಿ, 2 ಸಿಕ್ಸರ್)ಶತಕದ ಬಲದಿಂದ ಆತಿಥೇಯ ಮಧ್ಯಪ್ರದೇಶ ಕ್ರಿಕೆಟ್ ತಂಡ ಕರ್ನಾಟಕ ತಂಡದ ವಿರುದ್ಧ ಬೃಹತ್ ಮೊತ್ತ ಕಲೆ ಹಾಕುವತ್ತ ಹೆಜ್ಜೆ ಇಟ್ಟಿದೆ.
ಮೂರನೇ ದಿನದಾಟವಾದ ರವಿವಾರ 4 ವಿಕೆಟ್ ಗಳ ನಷ್ಟಕ್ಕೆ 232 ರನ್ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಮಧ್ಯಪ್ರದೇಶ ತಂಡ 140 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 425 ರನ್ ಗಳಿಸಿದೆ. ನಾಯಕ ಶುಭಮ್ ಹಾಗೂ ಅವೇಶ್ ಖಾನ್(2) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಔಟಾಗದೆ 75 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಹರ್ಪ್ರೀತ್ ಸಿಂಗ್ 91 ರನ್ ಗಳಿಸಿ ಕೌಶಿಕ್ ಗೆ ಕ್ಲೀನ್ ಬೌಲ್ಡಾದರು. ವೆಂಕಟೇಶ್ ಅಯ್ಯರ್ ನಿನ್ನೆಯ ಸ್ಕೋರ್ ಗೆ ಕೇವಲ 1 ರನ್ ಸೇರಿಸಿ ವೈಶಾಕ್ ಗೆ ವಿಕೆಟ್ ಒಪ್ಪಿಸಿದರು. ಮೊದಲ ದಿನದಾಟದಲ್ಲಿ ಗಾಯಗೊಂಡು ನಿವೃತ್ತಿಯಾಗಿದ್ದ ಶುಭಮ್ ಇಂದು ಇನಿಂಗ್ಸ್ ಮುಂದುವರಿಸಿದರು. ಸಾರಾಂಶ್ ಜೈನ್(51 ರನ್, 128 ಎಸೆತ)ಅವರೊಂದಿಗೆ 7ನೇ ವಿಕೆಟ್ನಲ್ಲಿ 131 ರನ್ ಸೇರಿಸಿ ತಂಡದ ಮೊತ್ತ ಹಿಗ್ಗಿಸಿದರು.
ಕರ್ನಾಟಕದ ಬೌಲಿಂಗ್ ವಿಭಾಗದಲ್ಲಿ ವಾಸುಕಿ ಕೌಶಿಕ್(2-78), ಹಾರ್ದಿಕ್ ರಾಜ್(2-79)ಹಾಗೂ ವಿಜಯಕುಮಾರ್ ವೈಶಾಕ್(2-83)ತಲಾ ಎರಡು ವಿಕೆಟ್‌ಗಳನ್ನು ಪಡೆದರು.
ಸಂಕ್ಷಿಪ್ತ ಸ್ಕೋರ್
ಮಧ್ಯಪ್ರದೇಶ ಮೊದಲ ಇನಿಂಗ್ಸ್: 425/8
(ಶುಭಮ್ ಶರ್ಮಾ ಔಟಾಗದೆ 143, ಹರ್ಪ್ರೀತ್ ಸಿಂಗ್ 91, ಸಾರಾಂಶ್ ಜೈನ್ 51, ಕೌಶಿಕ್ 2-78, ಹಾರ್ದಿಕ್ ರಾಜ್ 2-79, ವಿಜಯಕುಮಾರ್ 2-83)