ಹೊಸದಿಲ್ಲಿ : ರೈಲು ಅಪಘಾತ ನಡೆದ ತಮಿಳುನಾಡಿನ ಕವರೈಪೆಟ್ಟೈ ಸ್ಥಳವನ್ನು ಪರಿಶೀಲಿಸಿದ ನಂತರ, ಸಿಗ್ನಲ್ ಮತ್ತು ಟೆಲಿಕಾಂ, ಎಂಜಿನಿಯರಿಂಗ್ ಹಾಗೂ ಕಾರ್ಯಾಚರಣೆ ವಿಭಾಗದ ಮೂವರು ಹಿರಿಯ ಅಧಿಕಾರಿಗಳನ್ನೊಳಗೊಂಡ ತಾಂತ್ರಿಕ ಸಮಿತಿಯು ದುಷ್ಕೃತ್ಯದ ಶಂಕೆ ವ್ಯಕ್ತಪಡಿಸಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಅಕ್ಟೋಬರ್ 11ರಂದು ಮೈಸೂರು-ದರ್ಭಾಂಗ ಬಾಗ್ಮತಿ ಎಕ್ಸ್ ಪ್ರೆಸ್ ರೈಲು ಸಂಖ್ಯೆ 12578, ರಾತ್ರಿ ಸುಮಾರು 8.30ರ ವೇಳೆಗೆ ಚೆನ್ನೈ ರೈಲು ವಿಭಾಗದ ಕವರೈಪೆಟ್ಟೈ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು, ಒಂಬತ್ತು ಮಂದಿಗೆ ಗಾಯವಾಗಿತ್ತು.
“ಹಿರಿಯ ಅಧಿಕಾರಿಗಳ ತಂಡವು ಇಂಟರ್ ಲಾಕಿಂಗ್ ವ್ಯವಸ್ಥೆಯ ಮೆಕಾನಿಕಲ್ ಬಿಡಿ ಭಾಗಗಳು ತೆರೆದುಕೊಂಡಿರುವುದನ್ನು ಪತ್ತೆ ಹಚ್ಚಿದೆ. ಸಾಮಾನ್ಯವಾಗಿ, ಅಪಘಾತ ಸಂಭವಿಸಿದ ಸಂದರ್ಭದಲ್ಲಿ ರೈಲು ಎಂಜಿನ್ ಹಾಗೂ ಕೋಚ್ ಗಳ ರಭಸವಾದ ಡಿಕ್ಕಿಯಿಂದ ಈ ಬಿಡಿ ಭಾಗಗಳು ಮುರಿದು ಹೋಗಿರುತ್ತವೆ” ಎಂದು ಪರಿಶೀಲನಾ ತಂಡಕ್ಕೆ ನಿಕಟವಾಗಿರುವ ಮೂಲವೊಂದು ತಿಳಿಸಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
“ಇಂಟರ್ ಲಾಕಿಂಗ್ ವ್ಯವಸ್ಥೆಗೆ ಪ್ರವೇಶ ಪಡೆದಿರುವ ಕೆಲವು ದುಷ್ಕರ್ಮಿಗಳು ಕೆಲವು ನುರಿತ ವ್ಯಕ್ತಿಗಳಿಂದ ಅದರ ಕುರಿತು ಅರಿವು ಸಂಪಾದಿಸಿದ್ದು, ಅನುಭವಕ್ಕಾಗಿ ಬೇರೆಡೆ ಈ ಕೆಲಸವನ್ನು ಮಾಡಿರುವಂತೆ ತೋರುತ್ತಿದೆ” ಎಂದೂ ಹೇಳಲಾಗಿದೆ.
ಇದಕ್ಕೂ ಮುನ್ನ, ಕೆಲವು ಸುರಕ್ಷತಾ ತಜ್ಞರು ಡಾಟಾ ಲಾಗರ್ಸ್ ಯಾರ್ಡ್ ಸ್ಟಿಮ್ಯುಲೇಶ್ ವಿಡಿಯೊವನ್ನು ವಿಶ್ಲೇಷಿಸಿದ ನಂತರ, ಇಂಟರ್ ಲಾಕಿಂಗ್ ಬಿಂದುವಿನಲ್ಲಿ ಮೈಸೂರು-ದರ್ಭಾಂಗ್ ರೈಲು ಹಳಿ ತಪ್ಪಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.
ರೈಲ್ವೆಯ ಉನ್ನತ ಮಟ್ಟದ ಪರಿಶೀಲನೆಯಲ್ಲದೆ, ಈ ಪ್ರಕರಣದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು ಹಾಗೂ ರಾಷ್ಟ್ರೀಯ ತನಿಖಾ ದಳವೂ ತನಿಖೆಗೆ ಚಾಲನೆ ನೀಡಿದೆ.