ಗಾಝಾ : ಗಾಝಾದ ಮೇಲೆ ಇಸ್ರೇಲ್‍ನ ವೈಮಾನಿಕ ದಾಳಿ ತೀವ್ರಗೊಂಡಿದ್ದು ಶನಿವಾರ ನಡೆದ ದಾಳಿಯಲ್ಲಿ ಕನಿಷ್ಟ 29 ಫೆಲೆಸ್ತೀನೀಯರು ಸಾವನ್ನಪ್ಪಿದ್ದಾರೆ. ಜಬಾಲಿಯಾ ಪ್ರದೇಶದಲ್ಲಿ ಸಾವಿರಾರು ಮಂದಿ ಅತಂತ್ರರಾಗಿದ್ದಾರೆ ಎಂದು ಅಂತರಾಷ್ಟ್ರೀಯ ರಕ್ಷಣಾ ಏಜೆನ್ಸಿಗಳು ವರದಿ ಮಾಡಿವೆ.
ನಿರಾಶ್ರಿತರ ಶಿಬಿರಗಳಿರುವ ಉತ್ತರ ಗಾಝಾದ ಜಬಾಲಿಯಾ ಪ್ರದೇಶದ ಮೇಲೆ ಇಸ್ರೇಲ್ ಪಡೆಗಳ ಬಾಂಬ್ದಾಳಿ ಹಾಗೂ ಭೂ ಕಾರ್ಯಾಚರಣೆ ಮುಂದುವರಿದಿದೆ. ಶನಿವಾರ ಗಾಝಾದಲ್ಲಿ ನಡೆದ ದಾಳಿಯಲ್ಲಿ 19 ಮಂದಿ, ಶನಿವಾರ ರಾತ್ರಿ ಜಬಾಲಿಯಾ ಮತ್ತು ನುಸಿರತ್ ನಿರಾಶ್ರಿತರ ಶಿಬಿರ ಪ್ರದೇಶದಲ್ಲಿನ ಎರಡು ಮನೆಗಳನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ.
ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಗಾಝಾದ ಆರೋಗ್ಯಾಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಈ ಮಧ್ಯೆ, ಮಧ್ಯ ಗಾಝಾದಿಂದ ಉತ್ತರ ಗಾಝಾಕ್ಕೆ ತಕ್ಷಣ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ನೀಡಿದ ಸೂಚನೆಯನ್ನು ಧಿಕ್ಕರಿಸುವಂತೆ ಸ್ಥಳೀಯ ನಿವಾಸಿಗಳನ್ನು ಹಮಾಸ್ ಆಗ್ರಹಿಸಿದೆ.
ಹಮಾಸ್ ಸಶಸ್ತ್ರ ಹೋರಾಟಗಾರರು ಆಸ್ಪತ್ರೆಗಳು ಹಾಗೂ ನಾಗರಿಕ ಕಟ್ಟಡಗಳನ್ನು ಬಳಸುತ್ತಿರುವ ಮಾಹಿತಿಯಿದೆ. ಆದ್ದರಿಂದ ನಾಗರಿಕರು ತಮ್ಮ ರಕ್ಷಣೆಗಾಗಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವುದು ಒಳಿತು ಎಂದು ಇಸ್ರೇಲ್ ಸೇನೆ ಪುನರುಚ್ಚರಿಸಿದೆ.