EBM News Kannada
Leading News Portal in Kannada

ರಾಜ್ಯದ ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಆರಂಭಿಸಲು ಚಿಂತನೆ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್

0


ಬೆಂಗಳೂರು: ರಾಜ್ಯದ ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಆರಂಭಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಈಗಾಗಲೇ 11 ಹೊಸ ಕಾಲೇಜುಗಳ ಸ್ಥಾಪನೆಗೆ ಆರ್ಥಿಕ ಇಲಾಖೆಯ ಅನುಮತಿ ಕೇಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.

ರವಿವಾರ ಇಲ್ಲಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ಎಂಬಿಬಿಎಸ್ ತರಗತಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಜತೆಗೆ ಗ್ರಾಮೀಣ ಭಾಗದವರಿಗೆ ಚಿಕಿತ್ಸೆ ಸಿಗಬೇಕೆಂಬ ಉದ್ದೇಶದಿಂದ ಸರಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಸರಕಾರ ಮುಂದಾಗಿದೆ ಎಮದರು.

ಇತರೆ ವೃತ್ತಿಗಿಂತ ವೈದ್ಯ ವೃತ್ತಿಗೆ ಸಾಕಷ್ಟು ಬೆಲೆ ಇದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಸೇವಾ ಮನೋಭಾವ ಇರಬೇಕು. ನೀವು ಜೀವನದಲ್ಲಿ ತೃಪ್ತಿ ಕಾಣಬೇಕು ಎಂದಾದರೆ, ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು. ಬಹಳ ಮುಖ್ಯವಾಗಿ ವೈದ್ಯ ವಿದ್ಯಾರ್ಥಿಗಳು ಸಂವಹನ ಕಲೆ ರೂಢಿಸಿಕೊಳ್ಳಬೇಕು. ಇದು ಇಲ್ಲವಾದರೆ ರೋಗಿ ಜತೆಗೆ ಸಂಪರ್ಕ ಸಾಧಿಸುವುದು ಕಷ್ಟವಾಗಲಿದೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ದೇಶದಲ್ಲೇ ಹೆಚ್ಚು 71 ವೈದ್ಯಕೀಯ ಕಾಲೇಜುಗಳಿದ್ದು, ಇವುಗಳ ಜತೆಗೆ ಈ ವರ್ಷ ಪಿಇಎಸ್, ಬಿಜಿಎಸ್ ಮತ್ತು ಎಸ್.ಆರ್.ಪಾಟೀಲ್ ವೈದ್ಯಕೀಯ ಕಾಲೇಜುಗಳು ಸೇರ್ಪಡೆಯಾಗಿವೆ. ಎಲ್ಲವನ್ನೂ ಸರಕಾರದಿಂದಲೇ ಮಾಡಲು ಅಸಾಧ್ಯ. ಖಾಸಗಿ ಸಹಕಾರ ಕೂಡ ಅಷ್ಟೇ ಮುಖ್ಯ ಎಂದು ಸಚಿವರು ಹೇಳಿದರು.

ಪಿಇಎಸ್ ವಿವಿ ಕುಲಾಪತಿ ಡಾ.ಎಂ.ಆರ್.ದೊರೆಸ್ವಾಮಿ ಅವರು ಶಿಕ್ಷಣ ಕ್ಷೇತ್ರದಲ್ಲಿ ದೂರದೃಷ್ಟಿ ಹಾಗೂ ಮಹತ್ತರ ಗುರಿ ಹೊಂದಿದವರು. ಅವರ ಸಾರಥ್ಯದ ಪಿಇಎಸ್ ವೈದ್ಯಕೀಯ ಶಿಕ್ಷಣಕ್ಕೂ ಮುಕ್ತಗೊಂಡಿರುವುದು ಉತ್ತಮ ಬೆಳವಣಿಗೆ. ಇದರಿಂದ ಪಿಇಎಸ್‍ನ ಶೇ.40ರಷ್ಟು ವೈದ್ಯಕೀಯ ಸೀಟುಗಳನ್ನು ಸರಕಾರಿ ಕೋಟಾ ಸೀಟುಗಳ ರೂಪದಲ್ಲಿ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಲಭ್ಯವಾಗಲಿವೆ ಎಂದು ಅವರು ತಿಳಿಸಿದರು.

ಪಿಇಎಸ್ ವಿವಿ ಕುಲಪತಿ ಡಾ.ಎಂ.ಆರ್.ದೊರೆಸ್ವಾಮಿ ಮಾತನಾಡಿ, ನಾನು ಮೊದಲಿಗೆ ಕುಪ್ಪಂನಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಿದೆ. ಇದಕ್ಕೆ ಅಲ್ಲಿನ ಆಂಧ್ರಪ್ರದೇಶ ಸರಕಾರ ಹೆಚ್ಚಿನ ಸಹಕಾರ ನೀಡಿತು. ಇದರ ಯಶಸ್ಸಿನ ನಂತರ ನಮ್ಮ ರಾಜ್ಯದಲ್ಲೂ ವೈದ್ಯಕೀಯ ಕಾಲೇಜು ಆರಂಭಿಸಬೇಕೆಂದು ಈಗ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಆರಂಭಿಸಿದ್ದೇವೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಕರ್ತವ್ಯ. ಮೊದಲ ಬ್ಯಾಚ್ ಆಗಿದ್ದರೂ ನಾವು ಯಾವುದೇ ಮೂಲಸೌಕರ್ಯದ ಕೊರತೆ ಇಲ್ಲದಂತೆ ಕಾಲೇಜು ಆರಂಭಿಸಿದ್ದೇವೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಜೈಪುರದ ಮಹಾತ್ಮ ಗಾಂಧಿ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯ ಕುಲಪತಿ ಡಾ.ಅಚಲ್ ಗುಲಾಟಿ, ಪಿಇಎಸ್ ವಿವಿ ಕುಲಾಪತಿ ಡಾ.ಎಂ.ಆರ್.ದೊರೆಸ್ವಾಮಿ, ಸಮ ಕುಲಾಪತಿ ಪ್ರೊ.ಡಿ.ಜವಾಹರ್, ವೈದ್ಯಕೀಯ ನಿರ್ದೇಶಕ ಡಾ.ಸುರೇಶ್ ಕೃಷ್ಣಮೂರ್ತಿ, ಕುಲಸಚಿವ ಡಾ.ಕೆ.ಎಸ್. ಶ್ರೀಧರ್, ಪಿಇಎಸ್‍ಯುಐಎಂಎಸ್‍ಆರ್ ಡೀನ್ ಡಾ. ಟಿ.ಆರ್. ಹರಿಪ್ರಸಾದ್, ಸಿಒಒ ಪ್ರೊ.ಅಜೋಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave A Reply

Your email address will not be published.