ಟೆಲ್ಅವೀವ್ : ಇಸ್ರೇಲ್-ಲೆಬನಾನ್ ಗಡಿಯಾದ್ಯಂತ ಹೋರಾಟ ತೀವ್ರಗೊಂಡಿದ್ದು ಲೆಬನಾನ್ ಕಡೆಯಿಂದ ಹೈಫಾ ನಗರದತ್ತ ಪ್ರಯೋಗಿಸಲಾದ ಐದು ಕ್ಷಿಪಣಿಗಳನ್ನು ತನ್ನ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಇಸ್ರೇಲ್ ಮಿಲಿಟರಿ ರವಿವಾರ ಘೋಷಿಸಿದೆ.
ಶನಿವಾರ ತಡರಾತ್ರಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರು ಇಸ್ರೇಲ್ನತ್ತ ಸುಮಾರು 320 ಕ್ಷಿಪಣಿಗಳನ್ನು ಪ್ರಯೋಗಿಸಿದ್ದು ಇದರಲ್ಲಿ ಹೆಚ್ಚಿನ ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ.
ಇದೇ ಸಂದರ್ಭ ಲೆಬನಾನ್ ಮತ್ತು ಗಾಝಾದಲ್ಲಿ ಸುಮಾರು 280 `ಉಗ್ರರ’ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಹೇಳಿದೆ.
ಶನಿವಾರ ರಾತ್ರಿ ಬೈರುತ್ನ ಕೇಂದ್ರ ಪ್ರದೇಶದ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 22 ಮಂದಿ ಸಾವನ್ನಪ್ಪಿದ್ದು 139 ಮಂದಿ ಗಾಯಗೊಂಡಿರುವುದಾಗಿ ಲೆಬನಾನ್ ನ ಉಸ್ತುವಾರಿ ಪ್ರಧಾನಿ ನಜೀಬ್ ಮಿಕಾತಿ ಹೇಳಿದ್ದಾರೆ.
ದಕ್ಷಿಣ ಲೆಬನಾನ್ ನ ಕಾಫ್ರಾದಲ್ಲಿನ ಮಿಲಿಟರಿ ಠಾಣೆಯ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಯೋಧರು ಸಾವನ್ನಪ್ಪಿದ್ದು ಇತರ ಮೂವರು ಗಾಯಗೊಂಡಿರುವುದಾಗಿ ಲೆಬನಾನ್ ಸೇನೆ ಹೇಳಿದೆ.