ಲಂಡನ್ : ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಪಾಕಿಸ್ತಾನ ವಿರುದ್ಧ ಮುಲ್ತಾನ್ನಲ್ಲಿ ಮಂಗಳವಾರದಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಮರಳಲು ಸಜ್ಜಾಗುತ್ತಿದ್ದಾರೆ.
33ರ ಹರೆಯದ ಆಲ್ರೌಂಡರ್ ಸ್ಟೋಕ್ಸ್ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿರಲಿಲ್ಲ. ಒಲಿ ಪೋಪ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು ಮೊದಲ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 47 ರನ್ ಅಂತರದಿಂದ ಗೆದ್ದುಕೊಂಡಿದೆ.
ಸ್ಟೋಕ್ಸ್ ಅವರು ರವಿವಾರ ತಂಡದೊಂದಿಗೆ ಅಭ್ಯಾಸದಲ್ಲಿ ಭಾಗಿಯಾಗಿದ್ದು, ಒಂದು ವೇಳೆ ಫಿಟ್ನೆಸ್ ಪಡೆದರೆ ಆಡುವ 11ರ ಬಳಗದಲ್ಲಿ ಕ್ರಿಸ್ ವೋಕ್ಸ್ ಬದಲಿಗೆ ಅಡುವ ನಿರೀಕ್ಷೆ ಇದೆ ಎಂದು ಇಂಗ್ಲೆಂಡ್ ತಂಡದ ವಕ್ತಾರರು ದೃಢಪಡಿಸಿದ್ದಾರೆ.
ಸಾಮಾನ್ಯವಾಗಿ ಇಂಗ್ಲೆಂಡ್ ತಂಡವು ಟೆಸ್ಟ್ ಪಂದ್ಯ ಆರಂಭಕ್ಕೆ ಎರಡು ದಿನ ಮುಂಚಿತವಾಗಿ ಆಡುವ 11ರ ಬಳಗವನ್ನು ಪ್ರಕಟಿಸುತ್ತದೆ. ಸೋಮವಾರ ಸ್ಟೋಕ್ಸ್ ಅವರ ಫಿಟ್ನೆಸ್ ಅನ್ನು ಸಂಪೂರ್ಣ ಅವಲೋಕಿಸಿದ ನಂತರ ನಿರ್ಧಾರ ತೆಗೆದುಕೊಳ್ಳಲಿದೆ.
ಸ್ಟೋಕ್ಸ್ ಆಗಸ್ಟ್ನಲ್ಲಿ ಹಂಡ್ರಡ್ ಸ್ಪರ್ಧಾವಳಿಯಲ್ಲಿ ಬ್ಯಾಟಿಂಗ್ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಶ್ರೀಲಂಕಾ ವಿರುದ್ಧ ಸ್ವದೇಶದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದರು. ಪೋಪ್ ನಾಯಕತ್ವದಲ್ಲಿ ಇಂಗ್ಲೆಂಡ್ ಈ ಸರಣಿಯನ್ನು 2-1ರಿಂದ ಗೆದ್ದುಕೊಂಡಿತ್ತು.