EBM News Kannada
Leading News Portal in Kannada

ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿಗೆ ಪ್ರಶ್ನೆಗಳ ಸುರಿಮಳೆಗೈದ ಕಾಂಗ್ರೆಸ್

0


ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ವಿಪಕ್ಷ ನಾಯಕರಾದ ಆರ್.ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಅವರ ಮುಂದೆ ಕಾಂಗ್ರೆಸ್ ಪಕ್ಷವು, ಕೆಲ ಪ್ರಶ್ನೆಗಳನ್ನಿಟ್ಟು ಸಾರ್ವಜನಿಕವಾಗಿ ಉತ್ತರಿಸುವಂತೆ ಸವಾಲು ಹಾಕಿದೆ.

ರವಿವಾರ ಪತ್ರಿಕಾ ಹೇಳಿಕೆ ನೀಡಿರುವ ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್ ಬಾಬು, ಬಿಜೆಪಿಯ ಈ ಇಬ್ಬರು ನಾಯಕರು ಸೈದಾಂತಿಕವಾಗಿ ವೈಫಲ್ಯವನ್ನು ಕಂಡಿದ್ದು, ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳುವ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ, ನಾಯಕರ ಮೇಲೆ ನಿರಂತರವಾಗಿ ಆರೋಪಗಳನ್ನು ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.

ಬಿ.ವೈ.ವಿಜಯೇಂದ್ರ ಅವರ ಬಾಲಭವನದ ಗಿರಾಕಿಗಳಾಗಿರುವ ಈ ಇಬ್ಬರು ನಾಯಕರಿಗೆ ಕೆಲ ಪ್ರಶ್ನೆಗಳನ್ನು ಕಾಂಗ್ರೆಸ್ ಪಕ್ಷದಿಂದ ಕೇಳುತ್ತಿದ್ದೇನೆ. ವಿಧಾನಸಭೆಯ ವಿಪಕ್ಷದ ನಾಯಕ ಅಶೋಕ್ ಅವರು 1978ರಲ್ಲಿ ಬಿಡಿಎಗೆ ಸೇರಿದ ಜಮೀನನ್ನು ಅಕ್ರಮವಾಗಿ ಪಡೆದುಕೊಂಡು, ಲೋಕಾಯುಕ್ತದಲ್ಲಿ ಪ್ರಕರಣ ದಾಖಲು ಆದ ನಂತರ ಕಾನೂನು ಕುಣಿಕೆ ತಪ್ಪಿಸಿಕೊಳ್ಳಲು ವಾಪಸ್ಸು ದಾನ ಮಾಡಿದ್ದು ಸುಳ್ಳೇ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು ದಕ್ಷಿಣ ತಾಲೂಕು ಉತ್ತರಹಳ್ಳಿ ಹೋಬಳಿ ಬಿ.ಎಮ್.ಕಾವಲ್ ಗ್ರಾಮಕ್ಕೆ ಸೇರಿದ ಸುಮಾರು 2500 ಎಕರೆ ಪ್ರದೇಶವನ್ನು ಕಾನೂನು ಬಾಹಿರವಾಗಿ ತಾವು ಶಾಸಕರಾಗಿ ಹಂಚಿಕೆ ಮಾಡಿರುವುದನ್ನು ಒಪ್ಪಿಕೊಳ್ಳುವಿರಾ?, ಈ ಬಗ್ಗೆ ನ್ಯಾಯಾಂಗ ತನಿಖೆ ಮಾಡಲು ಸರಕಾರಕ್ಕೆ ಒಪ್ಪಿಗೆ ನೀಡುವಿರಾ ಎಂದು ಅಶೋಕ್ ಅವರಿಗೆ ರಮೇಶ್ ಬಾಬು ಸವಾಲು ಹಾಕಿದ್ದಾರೆ.

ಕಂದಾಯ ಸಚಿವರಾಗಿದ್ದ ವೇಳೆ ದೊಡ್ಡಬಳ್ಳಾಪುರ ತಾಲೂಕಿನ ಕಂದಾಯ ಭೂಮಿಯನ್ನು ಅಕ್ರಮವಾಗಿ ಕೆಲವು ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡಿರುವುದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಲು ತಾವು ಸಿದ್ಧರಿದ್ದೀರಾ?, ಕಾನೂನುಬಾಹಿರವಾಗಿ ತಮ್ಮ ಒಡೆತನಕ್ಕೆ ಸೇರಿದ ಶಿಕ್ಷಣ ಸಂಸ್ಥೆಗೆ ಸರಕಾರದ ಆಸ್ತಿಯನ್ನು ಪಡೆದಿದ್ದು ಇದನ್ನು ತನಗೆ ಒಳಪಡಿಸಲು ಸಿದ್ಧವಿದ್ದೀರಾ ಎಂದು ಅಶೋಕ್ ಅವರಿಗೆ ರಮೇಶ್ ಬಾಬು ಪ್ರಶ್ನಿಸಿದ್ದಾರೆ.

ಇನ್ನು ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ರಾಜಕೀಯಕ್ಕೆ ಪ್ರವೇಶ ಪಡೆದ ನಂತರ ಇಲ್ಲಿಯವರೆಗೆ ಸರಕಾರದಿಂದ ಎಷ್ಟು ವಸತಿ ನಿವೇಶನ, ಕೈಗಾರಿಕಾ ನಿವೇಶನ ಮತ್ತು ನಾಗರಿಕ ಸೌಲಭ್ಯದ ನಿವೇಶಗಳನ್ನು ಪಡೆದುಕೊಂಡಿದ್ದಾರೆ. ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ಮೇಲೆ ವೈಯಕ್ತಿಕ ಟೀಕೆಗಳನ್ನು ಮಾಡುತ್ತಿರುವ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಸರಕಾರದಲ್ಲಿ ಕೇಂದ್ರ ರೈಲ್ವೆ ಇಲಾಖೆಯ ಗ್ರಾಹಕ ಮಂಡಳಿಯ ಅಧ್ಯಕ್ಷ ಸ್ಥಾನ ಮತ್ತು ರಾಜ್ಯ ಅರಣ್ಯ ಇಲಾಖೆಯಲ್ಲಿ ನಿಗಮದ ಅಧ್ಯಕ್ಷ ಸ್ಥಾನ ಪಡೆದಿದ್ದು ಯಾರಿಂದ ಎಂದು ರಮೇಶ್ ಬಾಬು ಪ್ರಶ್ನಿಸಿದ್ದಾರೆ.

ಕರ್ನಾಟಕ ಹೌಸಿಂಗ್ ಬೋರ್ಡ್ ನಿರ್ದೇಶಕರಾಗಿ ನಿಯಮ ಬಾಹಿರವಾಗಿ ನೀವೇ ನಾಗರಿಕ ನಿವೇಶನ ಪಡೆದಿರುವುದು ಸುಳ್ಳೇ?, ತಾವು ಪಡೆದಿರುವ ನಾಗರಿಕ ನಿವೇಶನದಲ್ಲಿ ಬಿರಿಯಾನಿ ಸೆಂಟರ್ ನಡೆಸುತ್ತಿರುವುದು ಸುಳ್ಳೇ?, ಇದರ ಕುರಿತು ತನಿಖೆ ಮಾಡಿಸಲು ಸರಕಾರಕ್ಕೆ ತಾವೇ ಪತ್ರ ಬರೆಯಲು ತಯಾರಿದ್ದೀರಾ ಎಂದು ಛಲವಾದಿ ನಾರಾಯಣಸ್ವಾಮಿ ಅವರಿಗೆ ರಮೇಶ್‍ಬಾಬು ಸವಾಲು ಹಾಕಿದ್ದಾರೆ.

ಅಧಿಕಾರಕ್ಕಾಗಿ ತಲೆ ಮೇಲೆ ಸ್ವಾಭಿಮಾನವನ್ನು ಬಿಟ್ಟು ಚಡ್ಡಿಯನ್ನು ಹೊತ್ತು ಪ್ರದರ್ಶನ ಮಾಡಿದ ನಾರಾಯಣಸ್ವಾಮಿ ಅವರು ಜನತಾದಳದಲ್ಲಿ ಜೀವರಾಜ್ ಆಳ್ವ ಮತ್ತು ಕಾಂಗ್ರೆಸ್‍ನಲ್ಲಿ ಎಸ್.ಬಂಗಾರಪ್ಪ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಆಶ್ರಯದಲ್ಲಿ ಬೆಳೆದದ್ದು ಸುಳ್ಳೇ ಎಂದು ರಮೇಶ್‍ಬಾಬು ಪ್ರಶ್ನಿಸಿದ್ದಾರೆ.

Leave A Reply

Your email address will not be published.