EBM News Kannada
Leading News Portal in Kannada

“ಗೋಶಾಲೆಯನ್ನು ಸ್ವಚ್ಛಗೊಳಿಸಿ, ಅಲ್ಲೇ ಮಲಗಿದರೆ ಕ್ಯಾನ್ಸರ್ ಗುಣಪಡಿಸಬಹುದು”: ಉತ್ತರ ಪ್ರದೇಶದ ಸಚಿವರ ಹೊಸ ಸಂಶೋಧನೆ

0


ಲಕ್ನೊ : ಗೋಶಾಲೆಯನ್ನು ಸ್ವಚ್ಛಗೊಳಿಸಿ, ಅಲ್ಲೇ ಮಲಗಿದರೆ ಕ್ಯಾನ್ಸರ್ ರೋಗ ಗುಣಪಡಿಸಬಹುದು ಎಂದು ಉತ್ತರ ಪ್ರದೇಶದ ಸಚಿವ ಸಂಜಯ್ ಸಿಂಗ್ ಗಂಗ್ವಾರ್ ಹೇಳಿಕೆ ನೀಡಿದ್ದಾರೆ.

ಕಬ್ಬು ಅಭಿವೃದ್ಧಿಯ ಕಿರಿಯ ಸಚಿವ ಸಂಜಯ್ ಸಿಂಗ್ ಗಂಗ್ವಾರ್ ಅವರು ರವಿವಾರ ತಮ್ಮ ಕ್ಷೇತ್ರವಾದ ಪಿಲಿಭೀತ್‌ನ ಪಕಾಡಿಯಾ ನೌಗಾವಾನ್‌ನಲ್ಲಿ ಗೋಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಜನರನ್ನುದ್ದೇಶಿಸಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ.

ಜನರು ತಮ್ಮ ವಿವಾಹ ವಾರ್ಷಿಕೋತ್ಸವ ಮತ್ತು ಮಕ್ಕಳ ಜನ್ಮದಿನವನ್ನು ಗೋಶಾಲೆಗಳಲ್ಲಿ ಆಚರಿಸುವಂತೆ ಒತ್ತಾಯಿಸಿದ ಸಚಿವರು ಕ್ಯಾನ್ಸರ್ ರೋಗಿಗಳು ಗೋಶಾಲೆಗಳನ್ನು ಸ್ವಚ್ಛಗೊಳಿಸಿ ಅದರಲ್ಲಿ ಮಲಗುವುದರಿಂದ ತಮ್ಮ ರೋಗ ಗುಣಪಡಿಸಿಕೊಳ್ಳಬಹುದು. ಹಸುಗಳನ್ನು ಸಾಕಿ ಅವುಗಳ ಸೇವೆ ಮಾಡುವ ಮೂಲಕ ರಕ್ತದೊತ್ತಡದ ಔಷಧಿಗಳ ಪ್ರಮಾಣವನ್ನು 10 ದಿನಗಳಲ್ಲಿ ಅರ್ಧಕ್ಕೆ ಇಳಿಸಬಹುದು ಎಂದು ಅವರು ಹೇಳಿದ್ದಾರೆ.

‘‘ರಕ್ತದೊತ್ತಡದ ರೋಗಿಗಳಿದ್ದರೆ ಕೇಳಿ. ಇಲ್ಲಿ ಹಸುಗಳಿವೆ. ಆ ವ್ಯಕ್ತಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಹಸುವಿನ ಸೇವೆ ಮಾಡುವುದರಿಂದ ತನ್ನ ಔಷಧವನ್ನು ಅರ್ಧ ಪ್ರಮಾಣಕ್ಕೆ ಇಳಿಸಬಹುದು. ಆ ವ್ಯಕ್ತಿ ರಕ್ತದೊತ್ತಡಕ್ಕೆ ಔಷಧಿಯಾಗಿ 20 ಮಿ.ಗ್ರಾಂ ಡೋಸ್ ತೆಗೆದುಕೊಳ್ಳುತ್ತಿದ್ದರೆ. ಹಸುವಿನ ಸೇವೆಯಿಂದ 10 ದಿನಗಳಲ್ಲಿ 10 ಮಿಗ್ರಾಂಗೆ ಔಷಧಿ ಪ್ರಮಾಣ ಇಳಿಯುತ್ತದೆ”, ಎಂದು ಅವರು ಕರೆ ನೀಡಿದ್ದಾರೆ.

” ನೀವು ಹಸುವಿನ ಬೆರಣಿ ಸುಟ್ಕರೆ ಸೊಳ್ಳೆಗಳಿಂದ ನಿಮಗೆ ಪರಿಹಾರ ಸಿಗುತ್ತದೆ. ಆದ್ದರಿಂದ, ಹಸು ಉತ್ಪಾದಿಸುವ ಎಲ್ಲವೂ ಒಂದು ರೀತಿಯಲ್ಲಿ ಉಪಯುಕ್ತವಾಗಿದೆ,” ಎಂದು ಅವರು ಪ್ರತಿಪಾದಿಸಿದರು.

Leave A Reply

Your email address will not be published.