ಹೊಸದಿಲ್ಲಿ : ಜಂಟಿ ಸಂಸದೀಯ ಸಮಿತಿ ಮುಂದೆ ಸೋಮವಾರ ವಕ್ಫ್ ಮಸೂದೆ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವವರಲ್ಲಿ ನಾಸಿಕ್ ದೇವಾಲಯದ ಮುಖ್ಯ ಅರ್ಚಕ, ಮೂವರೂ ನ್ಯಾಯವಾದಿಗಳು ಹಾಗೂ ಮುಸ್ಲಿಂ ಸಂಘಟನೆಯ ಪ್ರತಿನಿಧಿಗಳು ಒಳಗೊಂಡಿದ್ದಾರೆ.
ವಕ್ಫ್ (ತಿದ್ದುಪಡಿ) ಮಸೂದೆ ಕುರಿತ ಜಂಟಿ ಸಂಸದೀಯ ಸಮಿತಿಯ ಸಭೆ ಸೋಮವಾರ ಹಾಗೂ ಮಂಗಳವಾರ ಇಲ್ಲಿ ನಡೆಯಲಿದೆ. ಜಮೀಯತ್ ಉಲಮಾ ಎ ಹಿಂದ್ ಹಾಗೂ ದಿಲ್ಲಿ, ಗೋವಾ ಮೂಲದ ಸನಾತನ ಸಂಸ್ಥಾದ ಪ್ರತಿನಿಧಿಗಳ ಅಭಿಪ್ರಾಯವನ್ನು ಸಮಿತಿ ಆಲಿಸಲಿದೆ.
ಬಿಜೆಪಿಯ ಜಗದಾಂಬಿಕ ಪಾಲ್ ನೇತೃತ್ವದ ಸಮಿತಿ ಮುಂದೆ ನಾಸಿಕ್ ಶ್ರೀ ಕಾಲಾರಾಮ್ ದೇವಾಲಯದ ಮುಖ್ಯ ಅರ್ಚಕ ಸುಧೀರ್ದಾಸ್ ಅವರು ಅಭಿಪ್ರಾಯ ಮಂಡಿಸಲಿದ್ದಾರೆ. ನ್ಯಾಯವಾದಿ ಅಶ್ವಿನಿ ಉಪಾಧ್ಯಾಯ, ವಿಶು ಶಂಕರ್ ಜೈನ್ ಹಾಗೂ ಅಮಿತಾ ಸಚ್ದೇವ್ ಅವರು ಮಸೂದೆಯ ಕುರಿತ ತಮ್ಮ ಅಭಿಪ್ರಾಯವನ್ನು ಸಮಿತಿ ಮುಂದೆ ಮಂಡಿಸಲಿದ್ದಾರೆ. ಸಚ್ದೇವ್ ಗೋವಾದ ಹಿಂದೂ ಜನ ಜಾಗೃತಿ ಸಮಿತಿಯನ್ನು ಪ್ರತಿನಿಧಿಸಲಿದ್ದಾರೆ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಣ್ಣಿಪ್ಪಾಡಿ ಕರಡು ಕಾನೂನು ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
ಮಸೂದೆಗೆ ಸಂಬಂಧಿಸಿದ ತಮ್ಮ ಅಭಿಪ್ರಾಯಗಳಿಗೆ ಬೆಂಬಲ ಹೆಚ್ಚಿಸಲು ಪ್ರತಿಸ್ಪರ್ಧಿ ಗುಂಪುಗಳು ಪ್ರಾರಂಭಿಸಿದ ಅಭಿಯಾನದ ನಡುವೆ ಉಭಯ ಸದನಗಳ ಜಂಟಿ ಸಮಿತಿ 1.2 ಕೋಟಿ ಈ ಮೇಲ್ ಪ್ರತಿಕ್ರಿಯೆಯನ್ನು ಸ್ವೀಕರಿಸಿದೆ.
ಮಸೂದೆ ಬೆಂಬಲಿಸಿ ದಾಖಲೆಗಳೊಂದಿಗೆ 75 ಸಾವಿರ ಪ್ರತಿಕ್ರಿಯೆಗಳು ಕೂಡ ಬಂದಿವೆ. ಆದುದರಿಂದ ಸಮಿತಿಯು ಲೋಕಸಭೆಯಿಂದ ಹೆಚ್ಚುವರಿ ಸಿಬ್ಬಂದಿಯ ಬೇಡಿಕೆ ಇರಿಸಲಿದೆ.