ಜೈಪುರ: ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಮಕ್ಕಳೇ ದೌರ್ಜನ್ಯ ಎಸಗಿದ್ದರಿಂದ ಬೇಸತ್ತ ವೃದ್ಧ ತಂದೆ-ತಾಯಿ ಮನೆಯ ನೀರಿನ ಟ್ಯಾಂಕ್ಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ವರದಿಯಾಗಿದೆ. ತಮ್ಮ ಆತ್ಮಹತ್ಯೆಗೆ ಕಾರಣದ ಟಿಪ್ಪಣಿ ಬರೆದಿಟ್ಟು 70 ವರ್ಷದ ವ್ಯಕ್ತಿ ಹಾಗೂ ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೇವಲ ಗಂಡುಮಕ್ಕಳು ಮಾತ್ರವಲ್ಲದೇ ಸೊಸೆಯಂದಿರು ಕೂಡಾ ಕನಿಷ್ಠ ಐದು ಬಾರಿ ಹಲ್ಲೆ ನಡೆಸಿದ್ದಾರೆ. ಜತೆಗೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾರೆ. ನಮಗೆ ಊಟ ನೀಡುವುದನ್ನೂ ನಿಲ್ಲಿಸಿದ್ದು, ಭಿಕ್ಷಾಪಾತ್ರೆ ಹಿಡಿದು ಭಿಕ್ಷಾಟನೆ ಮಾಡುವಂತೆ ಒತ್ತಡ ತರುತ್ತಿದ್ದಾರೆ ಎಂದು ಆತ್ಮಹತ್ಯೆ ಟಿಪ್ಪಣಿಯಲ್ಲಿ ವಿವರಿಸಲಾಗಿದೆ.
ಮೃತಪಟ್ಟವರನ್ನು ಹಝಾರಿರಾಮ್ ಬಿಷ್ಣೋಯಿ (70) ಮತ್ತು ಅವರ ಪತ್ನಿ ಚಾವಲಿ ದೇವಿ (68) ಎಂದು ಗುರುತಿಸಲಾಗಿದೆ. ರಾಜಸ್ಥಾನದ ನಾಗೂರು ಎಂಬಲ್ಲಿ ಇವರು ವಾಸವಿದ್ದರು.
ಈ ದಂಪತಿಗೆ ನಾಲ್ಕು ಮಕ್ಕಳಿದ್ದು, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು. ಎರಡು ಪುಟಗಳ ಟಿಪ್ಪಣಿಯನ್ನು ಮನೆಯ ಗೋಡೆಗೆ ಹಚ್ಚಲಾಗಿದ್ದು, ಮಗ ರಾಜೇಂದ್ರ ಮೂರು ಬಾರಿ ಹಲ್ಲೆ ನಡೆಸಿದ್ದರೆ, ಸುನೀಲ್ ಎರಡು ಬಾರಿ ಹಲ್ಲೆ ನಡೆಸಿದ್ದಾಗಿ ವಿವರಿಸಲಾಗಿದೆ.