ಬೈಡನ್-ನೆತನ್ಯಾಹು ದೂರವಾಣಿ ಮಾತುಕತೆ | ಲೆಬನಾನ್ ನಾಗರಿಕರಿಗೆ ಹಾನಿಯಾಗುವುದನ್ನು ತಪ್ಪಿಸುವಂತೆ ಅಮೆರಿಕ ಅಧ್ಯಕ್ಷರ ಸಲಹೆ
ವಾಶಿಂಗ್ಟನ್ : ತನ್ನ ಮೇಲೆ ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಗೆ ಸೂಕ್ತ ಉತ್ತರ ನೀಡಲು ಇಸ್ರೇಲ್ ಯೋಚಿಸುತ್ತಿರುವಂತೆಯೇ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪರಸ್ಪರರು ನಿಕಟ ಸಂಪರ್ಕದಲ್ಲಿರಲು ನಿರ್ಧರಿಸಿದ್ದಾರೆ. ಲೆಬನಾನ್ನಲ್ಲಿ ನಾಗರಿಕರಿಗೆ ಹಾನಿಯಾಗುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ತಪ್ಪಿಸುವಂತೆ ಅಮೆರಿಕ ಅಧ್ಯಕ್ಷರು ಇಸ್ರೇಲ್ ಪ್ರಧಾನಿಯನ್ನು ಆಗ್ರಹಿಸಿದ್ದಾರೆಂದು ಶ್ವೇತಭವನದ ಮೂಲಗಳು ತಿಳಿಸಿವೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ನಾಲ್ಕು ವಾರಗಳಿಗಿಂತಲೂ ಕಡಿಮೆ ಸಮಯವಿರುವುರಿಂದ ಇರಾನ್ನ ತೈಲ ಅಥವಾ ಅಣುಸ್ಥಾವರಗಳ ದಾಳಿ ನಡೆಸದಂತೆ ವಾಶಿಂಗ್ಟನ್, ಇಸ್ರೇಲ್ ಮೇಲೆ ಒತ್ತಡ ಹೇರಿದೆಯನ್ನಲಾಗಿದೆ.
‘‘ ಮುಂಬರುವ ದಿನಗಳಲ್ಲಿ ಬೈಡನ್ ಹಾಗೂ ನೆತನ್ಯಾಹು ಅವರುಗಳು ನೇರವಾಗಿ ಹಾಗೂ ತಮ್ಮ ರಾಷ್ಟ್ರೀಯ ಭದ್ರತಾ ತಂಡಗಳ ಮೂಲಕ ಪರಸ್ಪರ ನಿಕಟ ಸಂಪರ್ಕದಲ್ಲಿರಲು ಸಮ್ಮತಿಸಿದ್ದಾರೆ’’ ಎಂದು ಶ್ವೇತಭವನವು ಬುಧವಾರ ಹೊರಡಿಸಿದ ಪ್ರಕಟಣೆಯೊಂದು ತಿಳಿಸಿದೆ.
ಆದರೆ ಈ ಪ್ರಕಟಣೆಯಲ್ಲಿ ಇರಾನ್ನ ಕ್ಷಿಪಣಿ ದಾಳಿಗೆ ಇಸ್ರೇಲ್ ಪ್ರತೀಕಾರ ತೀರಿಸುವ ಸಾಧ್ಯತೆಯ ಬಗ್ಗೆ ನೇರವಾಗಿ ಯಾವುದೇ ಉಲ್ಲೇಖವನ್ನು ಮಾಡಿಲ್ಲವೆನ್ನಲಾಗಿದೆ. ಆದರೆ ಟೆಹರಾನ್ನ ದಾಳಿಯನ್ನು ಬೈಡನ್ ಅವರು ಬಲವಾಗಿ ಖಂಡಿಸಿದ್ದಾರೆ ಹಾಗೂ ಇಸ್ರೇಲ್ ಬಲವಾದ ಬೆಂಬಲದ ವಾಗ್ದಾನ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಇಸ್ರೇಲ್ ರಕ್ಷಣಾ ಸಚಿವ ಯೊಯಾವ್ ಗ್ಯಾಲಾಂಟ್ ಅವರು ಬುಧವಾರ ನೀಡಿದ ಹೇಳಿಕೆಯೊಂದು ನಮ್ಮ ದಾಳಿಯು ಮಾರಣಾಂತಿಕ, ನಿಖರ ಹಾಗೂ ಅಚ್ಚರಿದಾಯಕವಾಗಿರುವುದು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಬೈಡನ್ ಅವರು ನೆತನ್ಯಾಹು ಅವರಿಗೆ ಕರೆ ಮಾಡಿರುವುದು ಹೆಚ್ಚಿನ ಮಹತ್ವವನ್ನು ಪಡೆದಿದೆ.
ಇರಾನ್ ಬೆಂಬಲಿತ ಹಿರ್ಬೊಲ್ಲಾ ಹೋರಾಟಗಾರರ ವಿರುದ್ಧ ಇಸ್ರೇಲ್ ಲೆಬನಾನ್ನಲ್ಲಿ ನಡೆಸುತ್ತಿರುವ ದಾಳಿ ಕಾರ್ಯಾಚರಣೆಯ ಬಗ್ಗೆಯೂ ಬೈಡನ್ ಹಾಗೂ ನೆತನ್ಯಾಹು ಚರ್ಚಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಹಿಜ್ಬುಲ್ಲಾದ ರಾಕೆಟ್ ದಾಳಿಗಳಿಂದ ತನ್ನನ್ನು ರಕ್ಷಿಸಿಕೊಳ್ಳುವ ಇಸ್ರೇಲ್ನ ಹಕ್ಕನ್ನು ಅಮೆರಿಕ ಅಧ್ಯಕ್ಷ ಸಮರ್ಥಿಸಿದ್ದಾರೆ. ಆದರೆ ಸಮರದ ಸಂದರ್ಭದಲ್ಲಿ ನಾಗರಿಕರಿಗೆ ಆಗಬಹುದಾದ ಹಾನಿಯನ್ನು ಅದರಲ್ಲೂ ವಿಶೇಷವಾಗಿ ಬೈರೂತ್ನಂತಹ ಜನದಟ್ಟಣೆಯ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಕನಿಷ್ಠಗೊಳಿಸಬೇಕೆಂದು ಅವರು ಇಸ್ರೇಲ್ಗೆ ಕರೆ ನೀಡಿದ್ದಾರೆ. ಗಾಝಾದಲ್ಲಿ ಹಮಾಸ್ ಒತ್ತೆಸೆರೆಯಿರಿಸಿರುವ ಒತ್ತೆಯಾಳುಗಳ ಬಿಡುಗಡೆಗೆ ರಾಜತಾಂತ್ರಿಕ ಮಾತುಕತೆಯನ್ನು ಪುನಾರಂಭಿಸುವ ತುರ್ತು ಅಗತ್ಯದ ಬಗ್ಗೆಯೂ ಉಭಯ ನಾಯತಕರು ಚರ್ಚಿಸಿದರೆಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ.