ಅಸ್ತಾನ(ಕಝಕ್ಸ್ತಾನ) : ಕಝಕ್ಸ್ತಾನದ ಅಸ್ತಾನದಲ್ಲಿ ಗುರುವಾರ ನಡೆದ ಏಶ್ಯನ್ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ನ ಸೆಮಿ ಫೈನಲ್ನಲ್ಲಿ ಚೈನೀಸ್ ತೈಪೆ ತಂಡದ ವಿರುದ್ಧ 0-3 ಅಂತರದಿಂದ ಸೋತ ನಂತರ ಭಾರತೀಯ ಪುರುಷರ ತಂಡವು ಸತತ ಮೂರನೇ ಬಾರಿ ಕಂಚಿನ ಪದಕ ಜಯಿಸಿದೆ.
ಭಾರತ ತಂಡವು 2021 ಹಾಗೂ 2023ರಲ್ಲಿ ಕಂಚಿನ ಪದಕಗಳನ್ನು ಬಾಚಿಕೊಂಡಿತ್ತು.
ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಶರತ್ ಕಮಲ್ ಅವರು ಲಿನ್ ಯುನ್-ಜು ವಿರುದ್ಧ 0-3 (7-11, 10-12, 9-11) ಅಂತರದಿಂದ ಸೋತಿದ್ದಾರೆ.
ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಮಾನವ್ ಠಕ್ಕರ್ ಕಠಿಣ ಹೋರಾಟ ನೀಡಿದರೂ ಕಾವೊ ಚೆಂಗ್-ಜು ವಿರುದ್ಧ 1-3(9-11, 11-8, 3-11, 11-13)ಅಂತರದಿಂದ ಸೋತಿದ್ದಾರೆ.
ಗೆಲ್ಲಲೇಬೇಕಾದ 3ನೇ ಸಿಂಗಲ್ಸ್ ಪಂದ್ಯದಲ್ಲಿ ಹರ್ಮೀತ್ ದೇಸಾಯಿ ಅವರು ಹುವಾಂಗ್ ಯಾನ್-ಚೆಂಗ್ ವಿರುದ್ಧ 0-3(6-11, 9-11, 7-11)ಅಂತರದಿಂದ ಶರಣಾದರು.
ಕ್ವಾರ್ಟರ್ ಫೈನಲ್ನಲ್ಲಿ ಆತಿಥೇಯ ಕಝಕ್ಸ್ತಾನ ತಂಡವನ್ನು 3-1 ಅಂತರದಿಂದ ಮಣಿಸಿದ್ದ ಭಾರತೀಯ ಟಿಟಿ ತಂಡ ಪದಕವನ್ನು ಖಚಿತಪಡಿಸಿತ್ತು.
ಬುಧವಾರ ಭಾರತೀಯ ಮಹಿಳೆಯರ ಟಿಟಿ ತಂಡವು ಕಂಚಿನ ಪದಕ ಜಯಿಸಿದೆ. 1972ರಲ್ಲಿ ಏಶ್ಯನ್ ಟೇಬಲ್ ಟೆನಿಸ್ ಯೂನಿಯನ್ ಸ್ಪರ್ಧಾವಳಿಯನ್ನು ಆಯೋಜಿಸಲು ಆರಂಭಿಸಿದ ನಂತರ ಇದೇ ಮೊದಲ ಬಾರಿ ಮಹಿಳಾ ತಂಡ ಪದಕ ಗೆದ್ದುಕೊಂಡಿದೆ.