EBM News Kannada
Leading News Portal in Kannada

ಇಂಗ್ಲೆಂಡ್ ಪರ ಗರಿಷ್ಠ ರನ್ ಜೊತೆಯಾಟ ನಡೆಸಿದ ರೂಟ್, ಹ್ಯಾರಿ ಬ್ರೂಕ್

0


ಮುಲ್ತಾನ್ : ಪಾಕಿಸ್ತಾನ ತಂಡದ ವಿರುದ್ಧ ಗುರುವಾರ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಕ್ರಿಕೆಟಿಗರಾದ ಜೋ ರೂಟ್ ಹಾಗೂ ಹ್ಯಾರಿ ಬ್ರೂಕ್ ಇತಿಹಾಸ ನಿರ್ಮಿಸಿದರು.

ರೂಟ್ ಹಾಗೂ ಬ್ರೂಕ್ ನಾಲ್ಕನೇ ವಿಕೆಟ್‌ಗೆ 454 ರನ್ ಜೊತೆಯಾಟದಲ್ಲಿ ಭಾಗಿಯಾದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ದಾಖಲಾದ ಗರಿಷ್ಠ ಜೊತೆಯಾಟ ಇದಾಗಿದೆ. ಇದು ಟೆಸ್ಟ್ ಕ್ರಿಕೆಟ್ ಚರಿತ್ರೆಯಲ್ಲಿ ದಾಖಲಾದ 4ನೇ ಗರಿಷ್ಠ ಜೊತೆಯಾಟವಾಗಿದೆ.

ರೂಟ್ ಹಾಗೂ ಬ್ರೂಕ್ ಅವರು ವೆಸ್ಟ್‌ಇಂಡೀಸ್‌ನ ಲೆಜೆಂಡ್‌ಗಳಾದ ಕಾನ್ರಾಡ್ ಹಂಟೆ ಹಾಗೂ ಗ್ಯಾರಿ ಸೋಬರ್ಸ್ ಪಾಕಿಸ್ತಾನ ಎದುರು ಈ ಹಿಂದೆ ಗಳಿಸಿದ್ದ ಗರಿಷ್ಠ ಜೊತೆಯಾಟದ ದಾಖಲೆಯನ್ನು ಮುರಿದರು. ಹಂಟೆ ಹಾಗೂ ಸೋಬರ್ಸ್ 1958ರಲ್ಲಿ ಕಿಂಗ್‌ಸ್ಟನ್‌ನಲ್ಲಿ ಪಾಕ್ ವಿರುದ್ಧ 446 ರನ್ ಜೊತೆಯಾಟ ನಡೆಸಿದ್ದರು.

ಈ ಇಬ್ಬರು ಆಟಗಾರರು ತಮ್ಮ ಇನಿಂಗ್ಸ್ ವೇಳೆ ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ. ಜೋ ರೂಟ್ 375 ಎಸೆತಗಳಲ್ಲಿ ಜೀವನಶ್ರೇಷ್ಠ 262 ರನ್ ಗಳಿಸಿದರು. ಇದರಲ್ಲಿ 17 ಬೌಂಡರಿಗಳಿದ್ದವು. ಮತ್ತೊಂದೆಡೆ ಹ್ಯಾರಿ ಬ್ರೂಕ್ ಅವರು ತನ್ನ ಚೊಚ್ಚಲ ತ್ರಿಶತಕ ಸಿಡಿಸಿದರು.

ರೂಟ್ ಹಾಗೂ ಬ್ರೂಕ್ ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಇನಿಂಗ್ಸ್‌ಗಳಲ್ಲಿ ತಲಾ 250 ಪ್ಲಸ್ ಸ್ಕೋರ್ ಗಳಿಸಿದ ಮೂರನೇ ಜೋಡಿಯಾಗಿದ್ದಾರೆ. ಈ ಹಿಂದೆ 1958ರಲ್ಲಿ ಪಾಕಿಸ್ತಾನದ ವಿರುದ್ಧ ಕಾನ್ರಾಡ್ ಹಂಟೆ (260 ರನ್)ಹಾಗೂ ಗ್ಯಾರಿ ಸೋಬರ್ಸ್(365 ರನ್), 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾದ ಮಹೇಲ ಜಯವರ್ಧನೆ(374 ರನ್)ಹಾಗೂ ಕುಮಾರ ಸಂಗಕ್ಕರ(287 ರನ್)ಅಪರೂಪದ ಸಾಧನೆ ಮಾಡಿರುವ ಇನ್ನಿಬ್ಬರು ಜೋಡಿಯಾಗಿದ್ದಾರೆ.

ರೂಟ್ ಹಾಗೂ ಬ್ರೂಕ್ ಅವರ ಅಮೋಘ ಪ್ರದರ್ಶನವು ಇಂಗ್ಲೆಂಡ್ ನೂತನ ದಾಖಲೆ ನಿರ್ಮಿಸಲು ನೆರವಾಗಿದ್ದಲ್ಲದೆ, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಜೊತೆಯಾಟ ನಡೆಸಿದ ಸಾಧನೆಯನ್ನು ಮಾಡಿದ್ದಾರೆ. ಈ ಇಬ್ಬರ ಸಾಹಸದಿಂದ ಇಂಗ್ಲೆಂಡ್ ತಂಡವು ಪಾಕಿಸ್ತಾನದ 556 ರನ್‌ಗೆ ಉತ್ತರವಾಗಿ 7 ವಿಕೆಟ್‌ಗೆ 823 ರನ್ ಗಳಿಸಿದೆ.

►ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ವಿರುದ್ಧ ದಾಖಲಾದ ಗರಿಷ್ಠ ಜೊತೆಯಾಟ

454-ಜೋ ರೂಟ್-ಹ್ಯಾರಿ ಬ್ರೂಕ್(ಇಂಗ್ಲೆಂಡ್), ಮುಲ್ತಾನ್, 2024

446-ಕಾನ್ರಾಡ್ ಹಂಟೆ, ಗ್ಯಾರಿ ಸೋಬರ್ಸ್(ವೆಸ್ಟ್‌ಇಂಡೀಸ್), ಕಿಂಗ್‌ಸ್ಟನ್, 1958

437-ಎಂ.ಜಯವರ್ಧನೆ-ಟಿ. ಸಮರವೀರ(ಶ್ರೀಲಂಕಾ), ಕರಾಚಿ, 2009

410-ರಾಹುಲ್ ದ್ರಾವಿಡ್-ವೀರೇಂದ್ರ ಸೆಹ್ವಾಗ್(ಭಾರತ), ಲಾಹೋರ್.

Leave A Reply

Your email address will not be published.