EBM News Kannada
Leading News Portal in Kannada

‘ಕಳಸಾ-ಬಂಡೂರಿ’ಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಅನುಮತಿ : ಈಶ್ವರ್ ಖಂಡ್ರೆ ವಿಶ್ವಾಸ

0


ಬೆಂಗಳೂರು : ರಾಜ್ಯದ ಬಹುದಿನಗಳ ಬೇಡಿಕೆಯಾದ ಮಹದಾಯಿ ನದಿ ನೀರಿಗೆ ಸಂಬಂಧಿಸಿದ ಕಳಸಾ ಬಂಡೂರಿ ನಾಲಾ ಯೋಜನೆಗೆ ರಾಷ್ಟ್ರೀಯ ವನ್ಯ ಜೀವಿ ಮಂಡಳಿ ಅನುಮೋದನೆ ನೀಡುವ ವಿಶ್ವಾಸವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ (ಅ.9) ಹೊಸದಿಲ್ಲಿಯಲ್ಲಿ ಕೇಂದ್ರ ಅರಣ್ಯ, ಹವಾಮಾನ ಬದಲಾವಣೆ ಹಾಗೂ ಪರಿಸರ ಸಚಿವ ಭೂಪೇಂದ್ರ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿ ಸಭೆಯಲ್ಲಿ, ತಮ್ಮ ಇಲಾಖೆಯ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದು, ಈ ಯೋಜನೆ ಕುರಿತಂತೆ ಆಶಾದಾಯಕ ಚರ್ಚೆ ಆಗಿದೆ ಎಂದು ತಿಳಿಸಿರುವುದಾಗಿ ಹೇಳಿದರು.

ಮಹದಾಯಿ ನದಿಯ ಎರಡು ಉಪನದಿಗಳಾದ ಕಳಸಾ ಮತ್ತು ಬಂಡೂರಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸುವ ಈ ಯೋಜನೆಗೆ ಗೋವಾ ರಾಜ್ಯ ಸರಕಾರ ತಕರಾರು ಮಾಡುತ್ತದೆ. ಆದರೆ, 2018ರ ಆ.14ರಂದು ಮಹದಾಯಿ ನದಿ ನೀರು ವಿವಾದ ನ್ಯಾಯಾಧೀಕರಣ ನೀಡಿರುವ ವರದಿ ಸಹಿತವಾದ ನಿರ್ಣಯದಲ್ಲಿ ಕಳಸಾ-ಬಂಡೂರಿ ಯೋಜನೆಯಡಿ 3.9 ಟಿಎಂಸಿ ನೀರನ್ನು ತಿರುಗಿಸಲು ಅವಕಾಶ ನೀಡಿದೆ ಎಂದು ಅವರು ತಿಳಿಸಿದರು.

ಆದರೆ, ಇದಕ್ಕೆ ಪರಿಸರ ತೀರುವಳಿ ಅನುಮೋದನೆ ಅಗತ್ಯ ಎಂದು ಹೇಳಿದೆ ಎಂಬ ಅಂಶವನ್ನು ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳು ಮಂಡಳಿ ಸಭೆಗೆ ಮನವರಿಕೆ ಮಾಡಿಸಿದ್ದಾರೆ. ಅಲ್ಲದೆ, ಕೇಂದ್ರೀಯ ಜಲ ಆಯೋಗ 2022ರ ಡಿ.29ರ ತನ್ನ ಪತ್ರದಲ್ಲಿ ಕಳಸಾ ಬಂಡೂರಿ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಅನುಮತಿ ನೀಡಿದೆ ಎಂಬ ವಿಷಯವನ್ನು ಉಲ್ಲೇಖಿಸಲಾಗಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

ಕುಡಿಯುವ ನೀರಿನ ಯೋಜನೆಗಳ ಸಂಬಂಧ ಸುಪ್ರೀಂಕೋರ್ಟ್ ತೀರ್ಪುಗಳನ್ನೂ ಉಲ್ಲೇಖಿಸಿದ್ದು, ನಿನ್ನೆಯ ಸಭೆಯಲ್ಲಿ ಫಲಪ್ರದವಾದ ಮತ್ತು ಸಕಾರಾತ್ಮಕವಾದ ಚರ್ಚೆ ಆಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಗೆ ಮುಂದಿನ ಸಭೆಯಲ್ಲಿ ಅನುಮೋದನೆ ದೊರಕುವ ನಿರೀಕ್ಷೆ ಇದೆ. ಈ ಸಂಬಂಧ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ವತಿಯಿಂದ ಮಂಡಳಿಗೆ ವಿವರವಾದ ಪತ್ರ ಬರೆಯಲಾಗುವುದು ಎಂದು ಅವರು ತಿಳಿಸಿದರು.

Leave A Reply

Your email address will not be published.