ಕ್ಯಾಲಿಫೋರ್ನಿಯ: ಮೆಟಾ ಪ್ಲಾಟ್ ಫಾರ್ಮ್ಸ್ ಇಂಕ್ ಷೇರು ಮೌಲ್ಯ ಏರುತ್ತಲೇ ಹೋಗುತ್ತಿರುವುದರಿಂದ ಅಮೆಝಾನ್ ಒಡೆಯ ಜೆಫ್ ಬೆಝೋಸ್ ರನ್ನು ಹಿಂದಿಕ್ಕಿರುವ ಮಾರ್ಕ್ ಝುಕರ್ ಬರ್ಗ್, ವಿಶ್ವದ ಎರಡನೆ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಮೆಟಾವರ್ಸ್ ನ ಷೇರು ಮೌಲ್ಯವು ಇತ್ತೀಚಿನ ತಿಂಗಳುಗಳಲ್ಲಿ ಏರಿಕೆ ಕಾಣುತ್ತಿರುವುದರಿಂದ, ಅದರ ಒಟ್ಟಾರೆ ಮೌಲ್ಯವು 206.2 ಬಿಲಿಯನ್ ಡಾಲರ್ ದಾಟಿದೆ. ಇದರಿಂದಾಗಿ, ಮಾರ್ಕ್ ಝುಕರ್ ಬರ್ಗ್ ಆಸ್ತಿ ಮೌಲ್ಯವು ಅಮೆಝಾನ್ ಇಂಕ್ ಒಡೆಯ ಬೆಝೋಸ್ ಗಿಂತ $ 1.1 ಬಿಲಿಯನ್ ನಷ್ಟು ಹೆಚ್ಚಾಗಿದೆ. ಅಲ್ಲದೆ, ಟೆಸ್ಲಾ ಇಂಕ್ ಒಡೆಯ ಎಲಾನ್ ಮಸ್ಕ್ ಗಿಂತ $ 50 ಬಿಲಿಯನ್ ಹಿಂದಿದೆ.
ಎರಡನೆಯ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಹೆಚ್ಚು ಏರಿಕೆ ಕಂಡಿರುವ ಮೆಟಾ ಷೇರು ಮೌಲ್ಯವು ಶೇ. 23ರಷ್ಟು ಅಧಿಕವಾಗಿದೆ. ಗುರುವಾರ ಮೆಟಾದ ಷೇರು ಮೌಲ್ಯವು ಸಾರ್ವಕಾಲಿಕ ದಾಖಲೆಯಾದ $ 582.77 ತಲುಪಿತು.
ಮೆಟಾದ ಸಹ ಸಂಸ್ಥಾಪಕ ಹಾಗೂ ಕಾರ್ಯಕಾರಿ ಅಧಿಕಾರಿಯಾದ 40 ವರ್ಷ ವಯಸ್ಸಿನ ಮಾರ್ಕ್ ಝುಕರ್ ಬರ್ಗ್, ಈ ವರ್ಷದ ಶ್ರೀಮಂತಿಕೆಯ ಸೂಚ್ಯಂಕದಲ್ಲಿ 4 ಸ್ಥಾನಗಳನ್ನು ಪಡೆದಿದ್ದಾರೆ.