ಅಹ್ಮದಾಬಾದ್: ಭಯಾನಕ ಪ್ರತೀಕಾರದ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ತನ್ನ ತಂದೆಯ ಹಂತಕನನ್ನು 22 ವರ್ಷಗಳ ಬಳಿಕ ಹತ್ಯೆ ಮಾಡಿರುವ ಘಟನೆ ಅಹ್ಮದಾಬಾದ್ ನ ಬೋದಕದೇವ್ ಪ್ರದೇಶದಲ್ಲಿ ನಡೆದಿದೆ.
ಆರೋಪಿಯನ್ನು ರಾಜಸ್ಥಾನದ ಗೋಪಾಲ್ ಸಿಂಗ್ ಭಾಟಿ (30) ಎಂದು ಗುರುತಿಸಲಾಗಿದೆ. ಎಂಟನೇ ವಯಸ್ಸಿನಲ್ಲಿ ತಂದೆಯ ಹತ್ಯೆಗೆ ಸಾಕ್ಷಿಯಾಗಿದ್ದ ಬಾಲಕ ಬೆಳೆಯುತ್ತಲೇ ಹಂತಕರ ಕಥೆಗಳನ್ನು ಕೇಳುತ್ತಾ ಬಂದಿದ್ದ. ತಂದೆಯ ಹಂತಕನ ಮೇಲೆ ಸೇಡು ತೀರಿಸಿಕೊಳ್ಳಲೇಬೇಕು ಎಂಬ ಭಾವನೆ ಆತನಲ್ಲಿ ದಟ್ಟವಾಗಿ ಮೂಡಿತ್ತು. ಈ ಅವಕಾಶಕ್ಕಾಗಿ ಕಾದಿದ್ದ ಈತ ಕೊನೆಗೂ ಸೇಡು ತೀರಿಸಿಕೊಂಡಿದ್ದಾನೆ.
ಅಹ್ಮದಾಬಾದ್ ನ ತಾಲ್ತೇಜ್ ಪ್ರದೇಶದ ವಸತಿ ಕಾಲೋನಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ನಖತ್ ಸಿಂಗ್ ಭಾಟಿ (50) ಮಂಗಳವಾರ ಮಧ್ಯಾಹ್ನ ಸೈಕಲ್ ನಲ್ಲಿ ಹೋಗುತ್ತಿದ್ದಾಗ, ಪಿಕಪ್ ಟ್ರಕ್ ಹರಿದು ಮೃತಪಟ್ಟಿದ್ದ. ಇದು ಅಪಘಾತ ಎಂದು ಮೊದಲು ನಂಬಲಾಗಿತ್ತು. ಆರೋಪಿ ಗೋಪಾಲ್ ಸಿಂಗ್ ಭಾತಿ, ನಖಾತ್ ಮೇಲೆ ಪಿಕಪ್ ಹರಿಸಿದ ಬಳಿಕ ಓಡಿಹೋಗಿದ್ದ. ಆದರೆ ಸ್ವಲ್ಪ ದೂರದಲ್ಲೇ ಆತನನ್ನು ಪೊಲೀಸರು ಸೆರೆಹಿಡಿದು ನಿರ್ಲಕ್ಷ್ಯದ ಚಾಲನೆ ಪ್ರಕರಣ ದಾಖಲಿಸಿದ್ದರು.
ಆದರೆ ತನಿಖೆ ಇದೊಂದು ಪೂರ್ವಯೋಜಿತ ಕೃತ್ಯ ಎನ್ನುವುದನ್ನು ದೃಢಪಡಿಸಿದೆ. ಗೋಪಾಲ್ ನ ತಂದೆ ಹರಿಸಿಂಗ್ ಭಾತಿಯನ್ನು ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಟ್ರಕ್ ಹರಿಸಿ ಕೊಲ್ಲಲಾಗಿತ್ತು. ಈ ಪ್ರಕರಣದಲ್ಲಿ ನಖತ್ ಹಾಗೂ ನಾಲ್ವರು ಸಹೋದರರಿಗೆ ಏಳು ವರ್ಷ ಜೈಲು ಶಿಕ್ಷೆ ಆಗಿತ್ತು. ತನ್ನ ತಂದೆಯ ಸಾವಿಗೆ ಕಾರಣವಾದಂತೆ ಕ್ರೂರ ರೀತಿಯಲ್ಲೇ ನಖತ್ ವಿರುದ್ಧವೂ ಪ್ರತೀಕಾರ ತೀರಿಸಬೇಕು ಎನ್ನುವುದು ಈತನ ಮನಸ್ಸಿನಲ್ಲಿ ದಟ್ಟವಾಗಿ ಮೂಡಿತ್ತು ಎಂದು ಇನ್ಸ್ಪೆಕ್ಟರ್ ಎಸ್.ಎ.ಗೋಹಿಲ್ ಹೇಳಿದ್ದಾರೆ.