ವಾಷಿಂಗ್ಟನ್: ಇರಾನ್ ದೇಶದ ತೈಲ ಸೌಲಭ್ಯಗಳ ಮೇಲೆ ಸಂಭಾವ್ಯ ಇಸ್ರೇಲ್ ದಾಳಿ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಕಟಿಸಿದ್ದಾರೆ. ಅಮೆರಿಕ ಅಧ್ಯಕ್ಷರ ಹೇಳಿಕೆ ಬೆನ್ನಲ್ಲೇ ಗುರುವಾರ ತೈಲಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಲು ಒಂದು ತಿಂಗಳ ಅವಧಿ ಇರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ವಿಶೇಷ ಮಹತ್ವ ಪಡೆದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬೈಡನ್, ಟೆಹರಾನ್ ಇತ್ತೀಚೆಗೆ ನಡೆಸಿದ ಕ್ಷಿಪಣಿದಾಳಿಗೆ ಕನಿಷ್ಠ ಗುರುವಾರದ ಮುನ್ನ ಇಸ್ರೇಲ್ ಯಾವುದೇ ಪ್ರತಿದಾಳಿ ನಡೆಸುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಸ್ಪಷ್ಟಪಡಿಸಿದರು.
ಇರಾನ್ ತೈಲಸೌಲಭ್ಯಗಳ ಮೇಲೆ ಇಸ್ರೇಲ್ ನಡೆಸುವ ದಾಳಿಯನ್ನು ಅಮೆರಿಕ ಬೆಂಬಲಿಸುತ್ತದೆಯೇ ಎಂದು ಕೇಳಿದ ಪ್ರಶ್ನೆಗೆ, “ಆ ಬಗ್ಗೆ ಚರ್ಚಿಸಲಾಗುತ್ತಿದೆ” ಎಂದರು. ಬೈಡನ್ ಹೇಳಿಕೆ ಬಳಿಕ ಮಧ್ಯಪ್ರಾಚ್ಯದ ಬಗ್ಗೆ ಕಳವಳ ಹೆಚ್ಚಿದ್ದು, ತೈಲಬೆಲೆ ಶೇಕಡ 5ರಷ್ಟು ಹೆಚ್ಚಳವಾಗಿದೆ.
ತೈಲ ಬೆಲೆ ಏರಿಕೆಯು ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಅಧ್ಯಕ್ಷೀಯ ಓಟಕ್ಕೆ ದೊಡ್ಡ ತಡೆಯಾಗುವ ಸಾಧ್ಯತೆ ಇದೆ. ಅಮೆರಿಕದಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚದ ವಿಷಯವನ್ನು ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದಾರೆ. ನವೆಂಬರ್ 5ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.
ಹೆಚ್ಚಿನ ಸಂಯಮ ಕಾಪಾಡಿಕೊಳ್ಳುವಂತೆ ಮಾಡಿಕೊಂಡಿರುವ ಮನವಿಯನ್ನು ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಪುರಸ್ಕರಿಸಿಲ್ಲವಾದರೂ ಇಸ್ರೇಲ್ ತಕ್ಷಣಕ್ಕೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ವಿಶ್ವಾಸವನ್ನು ಬೈಡನ್ ವ್ಯಕ್ತಪಡಿಸಿದರು.