ಬೆಂಗಳೂರು: 50 ಕೋಟಿ ರೂ. ಹಣಕ್ಕೆ ಬೇಡಿಕೆ ಹಾಗೂ ಜೀವ ಬೆದರಿಕೆ ಆರೋಪದಡಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಮುಖಂಡ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್‌ಗೌಡ ಎಂಬುವರ ವಿರುದ್ಧ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ಟಾಟಾ ಎಂಬುವರು ನೀಡಿದ ದೂರಿನನ್ವಯ ಎಚ್.ಡಿ.ಕುಮಾರಸ್ವಾಮಿ ಹಾಗೂ ರಮೇಶ್‌ಗೌಡ ವಿರುದ್ಧ ಅಮೃತಹಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಎಫ್ಐಆರ್ನಲ್ಲಿ ಏನಿದೆ?
ಬೆಂಗಳೂರಿನ ದಾಸರಹಳ್ಳಿಯ ನಿವಾಸಿಯಾದ ನಾನು ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದೇನೆ. ಜೊತೆಗೆ 2018 ರಿಂದ ಜೆಡಿಎಸ್ ಪಕ್ಷದಿಂದ ಗುರುತಿಸಿಕೊಂಡಿದ್ದೇನೆ. ನನ್ನ ಕಾರ್ಯ ಅಭಿನಂದಿಸಿ ಪಕ್ಷದ ಸೋಷಿಯಲ್ ಮೀಡಿಯಾ ವಿಂಗ್ ಗೆ ಉಪಾಧ್ಯಕ್ಷನಾಗಿ ಮಾಡಿದ್ದಾರೆ. ನಾನು ಉಪಾಧ್ಯಕ್ಷನಾದ ಬಳಿಕ ದೇವೇಗೌಡರು, ಕುಮಾರಸ್ವಾಮಿ ಸೇರಿ ಸಭೆ ಮಾಡಿರುತ್ತೇವೆ. ಸಾಮಾಜಿಕ ಜಾಲತಾಣ ಸೇರಿದಂತೆ ಪಕ್ಷದ ಏಳಿಗೆ ಬಗ್ಗೆ ಚರ್ಚೆಗಳನ್ನು ನಡೆಸಿರುತ್ತೇವೆ. 2019 ರಲ್ಲಿ ಮಂಡ್ಯ ಲೋಕಸಭಾ ಎಲೆಕ್ಷನ್ ಸಂಧರ್ಭದಲ್ಲಿ ನಿಖಿಲ್ ಪರವಾಗಿ ಸಾಕಷ್ಟು ಅಭಿಯಾನ ಮಾಡಿದ್ದೇವೆ. ಈ ಅಭಿಯಾನಗಳಿಗೆ ನಾನು ವೈಯುಕ್ತಿಕವಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದೇನೆ. ಇದಾದ ಬಳಿಕ ನಾನು ಕೆಲ ವರ್ಷಗಳಿಂದ ನನ್ನ ರಿಯಲ್ ಎಸ್ಟೇಟ್ ಉದ್ಯಮದ ಬಗ್ಗೆ ಗಮನ ಹರಿಸಿದ್ದೆ. ಹೀಗಾಗಿ ಪಕ್ಷದ ಕಾರ್ಯಗಳಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಕಳೆದ ಒಂದು ತಿಂಗಳಿಂದ ನನ್ನ ಮನೆಗೆ ಆಗಮಿಸಿದ್ದ ಮಾಜಿ ಎಂಎಲ್ ಸಿ ರಮೇಶ್ ಗೌಡ, ಪಕ್ಷದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಕೋರಿದ್ದರು. ಎಚ್.ಡಿ.ಕುಮಾರಸ್ವಾಮಿಯವರು ಪಕ್ಷದ ಸಂಘಟನೆಯ ಜವಾಬ್ಧಾರಿ ವಹಿಸಿಕೊಳ್ಳುವಂತೆ ಮನವಿ ಮಾಡಿದ್ದರು.
ಹೀಗೆ ನಿರಂತರ ಸಂಪರ್ಕದಲ್ಲಿದ್ದ ರಮೇಶ್ ಗೌಡ ಅವರು ಆಗಸ್ಟ್ 24 2024 ರಂದು ಶನಿವಾರ ರಾತ್ರಿ 10 ಗಂಟೆಗೆ ಮನೆಗೆ ಆಗಮಿಸಿದ್ದರು. ನಮ್ಮ ಜೊತೆಯಲ್ಲಿ ಕೂತು ಊಟ ಮಾಡುತ್ತಾ ಚನ್ನಪಟ್ಟಣ ಉಪ ಚುನಾವಣೆ ಬಗ್ಗೆ ವಿವರಿಸತೊಡಗಿದರು. ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ನೀಡೋದು ಅಂತಿಮವಾಗಿದ್ದು , ಈ ಬಾರಿ ಚುನಾವಣಾ ಕಾರ್ಯದಲ್ಲಿ ಸಕ್ರಿಯವಾಗಿರಲು ಮನವಿ ಮಾಡಿದರು. ಇದರ ಬಗ್ಗೆ ನಾನು ಆಲೋಚಿಸುತ್ತಿರುವಾಗಲೇ ತಮ್ಮ ಮೊಬೈಲ್ ನಿಂದ ಎಚ್ ಡಿ ಕುಮಾರಸ್ವಾಮಿ ಅವರಿಗೆ ಕರೆ ಮಾಡಿದರು. ಕುಮಾರಸ್ವಾಮಿ ಜೊತೆಯಲ್ಲಿ ಮಾತನಾಡುತ್ತ ರಮೇಶ್ ಗೌಡ ನಮ್ಮ (ವಿಜಯ್ ಟಾಟಾ) ಮನೆಗೆ ಬಂದಿರುವುದಾಗಿ ತಿಳಿಸಿ ನನಗೆ ಕುಮಾರಸ್ವಾಮಿ ಜೊತೆ ಮಾತನಾಡಲು ಫೋನ್ ಕೊಟ್ಟರು. ಕುಶಲೋಪರಿ ವಿಚಾರಿಸಿದ ಕುಮಾರಸ್ವಾಮಿ ಚನ್ನಪಟ್ಟಣ ಉಪ ಚುನಾವಣೆ ಬಗ್ಗೆ ಪ್ರಸ್ತಾಪಿಸಿದರು. ಈ ಬಾರಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಮಗೆ ಗೆಲುವು ಅನಿವಾರ್ಯ. ಚುನಾವಣಾ ಖರ್ಚಿಗಾಗಿ 50 ಕೋಟಿ ರೂಪಾಯಿ ಕೊಡಬೇಕಾಗುತ್ತೆ ಎಂದರು. ಕುಮಾರಸ್ವಾಮಿ ಅವರ ಮಾತಿನಿಂದ ವಿಚಲಿತನಾದ ನಾನು “ಸರ್ ನನ್ನ ಬಳಿ ಅಷ್ಟೊಂದು ಹಣವಿಲ್ಲ. ನಾನು ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳನ್ನು ಕಂಪ್ಲೀಟ್ ಮಾಡಬೇಕು ಎಂದು ಉತ್ತರಿಸಿದೆ. ನನ್ನ ಮಾತಿನಿಂದ ಕೋಪಗೊಂಡ ಕುಮಾರಸ್ವಾಮಿ 50 ಕೋಟಿ ರೆಡಿ ಮಾಡು ಇಲ್ಲದೆ ಹೋದರೆ ನಾನೇನ್ ಮಾಡುತ್ತೇನೆ ಗೊತ್ತಿಲ್ಲ. ಬೆಂಗಳೂರಿನಲ್ಲಿ ರಿಯಲ್ ಎಷ್ಟೇಟ್ ಉದ್ಯಮ ನಡೆಸೋದು ಮಾತ್ರವಲ್ಲ ಬದುಕೋದೇ ಕಷ್ಟವಾಗುತ್ತೆ ಎಂದು ಬೆದರಿಕೆ ಹಾಕಿ ಫೋನ್ ಕಟ್ ಮಾಡಿದರು.
ರಮೇಶ್ ಗೌಡ 50 ಕೋಟಿ ರೂ. ರೆಡಿ ಮಾಡಿಕೊಳ್ಳಿ ಜೊತೆಗೆ ದೇವಸ್ಥಾನ , ಶಾಲೆ ಕಟ್ಟಿಸುತ್ತಿದ್ದು ಅದಕ್ಕೆ ಐದು ಕೋಟಿ ನೀಡುವಂತೆ ಒತ್ತಾಯಿಸಿದ್ರು. ಈ ಹಣ ನೀಡದೇ ಇದ್ರೆ ನಿಮಗೆ ತೊಂದರೆ ಎದುರಾಗುತ್ತೆ ಎಂದು ಧಮ್ಕಿ ಹಾಕಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಮೇಶ ಗೌಡರು ಆಗಸ್ಟ್.30, ಸೆಪ್ಟೆಂಬರ್ 6 ಮತ್ತು 11 ತಾರೀಕು ವಾಟ್ಸಪ್ ಸಂದೇಶ ಕೂಡ ಕಳುಹಿಸಿರುತ್ತಾರೆ. ಕುಮಾರಸ್ವಾಮಿ ಹಾಗು ರಮೇಶ್ ಗೌಡ ನನ್ನ ವಿರುದ್ಧ ಷಡ್ಯಂತ್ರ ರಚಿಸಿ ಹಣಕ್ಕಾಗಿ ಬೇಡಿಕೆ ಇಟ್ಟು ಜೀವಬೆದರಿಕೆ ಒಡ್ಡುತ್ತಿದ್ದಾರೆ. ಕೂಡಲೇ ನನ್ನ ಹಾಗೂ ನನ್ನ ಕುಟುಂಬಕ್ಕೆ ಭದ್ರತೆ ಒದಗಿಸಿ, ಕುಮಾರಸ್ವಾಮಿ ಮತ್ತು ರಮೇಶ್ ಗೌಡ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದ ಎಂದು ಉದ್ಯಮಿ ವಿಜಯ್ ಟಾಟಾ ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.