ಚೆನ್ನೈ: ಸದ್ಗುರು ಜಗ್ಗಿ ವಾಸುದೇವ್ ಅವರ ವೆಬ್ ಸೈಟ್ ನಲ್ಲಿ 3,200 ರೂ.ವಿಗೆ ಮಾರಾಟಕ್ಕಿಟ್ಟಿರುವ ಅವರ ಪಾದದ ಫೋಟೊ ಕುರಿತು ನೆಟ್ಟಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಮಗೆ ಸದ್ಗುರು ಜಗ್ಗಿ ವಾಸುದೇವ್ ಬಗ್ಗೆ ಇದ್ದ ಎಲ್ಲ ಗೌರವವೂ ಕಳೆದು ಹೋಯಿತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಇಶಾ ಫೌಂಡೇಶನ್ ವೆಬ್ ಸೈಟ್ ನ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದು, ಅದರಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರ ಪಾದದ ಫೋಟೊ ರೂ. 3,200ಕ್ಕೆ ಮಾರಾಟಕ್ಕಿರುವುದನ್ನು ಬಹಿರಂಗ ಪಡಿಸಿದ್ದಾರೆ. ‘ಸದ್ಗುರು ಪಾದಂ ಫೋಟೊ’ ಎಂಬ ಶೀರ್ಷಿಕೆ ನೀಡಲಾಗಿದೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಓರ್ವ ಬಳಕೆದಾರರು, “ನಾನು ಅವರ ಬಗ್ಗೆ ಮತ್ತು ಇಶಾ ಫೌಂಡೇಶನ್ ಬಗ್ಗೆ ಹೊಂದಿದ್ದ ಎಲ್ಲ ಗೌರವವನ್ನು ಈ ಹಂತದಲ್ಲಿ ಕಳೆದುಕೊಂಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬರು, “ಆರ್ಥಿಕತೆ ಎಷ್ಟು ಹದಗೆಟ್ಟಿದೆಯೆಂದರೆ, ಸದ್ಗುರು ಜಗ್ಗಿ ವಾಸುದೇವ್ ತಮ್ಮ ಪಾದದ ಫೋಟೊವನ್ನು ಮಾರಾಟಕ್ಕಿಡುವಂತಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.