ಗೋವಾ: ಭಾರತೀಯ ನೌಕಾಪಡೆಯು ಎರಡನೇ ನಾವಿಕ ಸಾಗರ್ ಪರಿಕ್ರಮಕ್ಕೆ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ.ತ್ರಿಪಾಠಿ ಹಸಿರು ನಿಶಾನೆ ತೋರಿದ್ದು, ಇಬ್ಬರು ಮಹಿಳಾ ಅಧಿಕಾರಿಗಳು ಜಾಗತಿಕ ಸಮುದ್ರಯಾನವನ್ನು ಕೈಗೊಂಡಿದ್ದಾರೆ.
ಭಾರತೀಯ ನೌಕಾಪಡೆಯ ಇಬ್ಬರು ಮಹಿಳಾ ಅಧಿಕಾರಿಗಳಾದ ಲೆಫ್ಟಿನೆಂಟ್ ಕಮಾಂಡರ್ ದಿಲ್ನಾ ಕೆ ಮತ್ತು ಲೆಫ್ಟಿನೆಂಟ್ ಕಮಾಂಡರ್ ರೂಪ ಎ ಬುಧವಾರ ಸಮುದ್ರಯಾನದ ಮೂಲಕ ವಿಶ್ವವನ್ನು ಸುತ್ತುವ ಸವಾಲಿನ ಯಾತ್ರೆಯನ್ನು ಕೈಗೊಂಡಿದ್ದಾರೆ.
ನೌಕಾಪಡೆಯು ಎರಡನೇ ನಾವಿಕ ಸಾಗರ್ ಪರಿಕ್ರಮಕ್ಕೆ ಗೋವಾದ ಪಣಜಿ ಬಳಿಯ ಐಎನ್ಎಸ್ ಮಾಂಡೋವಿಯಿಂದ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ.ತ್ರಿಪಾಠಿ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ದಕ್ಷಿಣ ನೌಕಾ ಕಮಾಂಡ್ ಮುಖ್ಯಸ್ಥ ವೈಸ್ ಅಡ್ಮಿರಲ್ ವಿ ಶ್ರೀನಿವಾಸ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
8 ತಿಂಗಳ ಕಾಲ 23,000 ನಾಟಿಕಲ್ ಮೈಲುಗಳ ಸಮುದ್ರಯಾನವನ್ನು ಈ ಇಬ್ಬರು ಮಹಿಳಾ ಅಧಿಕಾರಿಗಳು ಕೈಗೊಳ್ಳಲಿದ್ದು, ನಾಲ್ಕು ಖಂಡಗಳು, ಮೂರು ಸಾಗರಗಳಲ್ಲಿ ಪ್ರಯಾಣಿಸಲಿದ್ದಾರೆ. ಇಬ್ಬರು ಅಧಿಕಾರಿಗಳು ಮೇ 2025 ರಲ್ಲಿ ಗೋವಾಕ್ಕೆ ಮರಳುವ ನಿರೀಕ್ಷೆಯಿದೆ.