ಹೊಸದಿಲ್ಲಿ: ಪೊಲೀಸರ ವಶದಿಂದ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಮತ್ತಿತರರನ್ನು ಬಿಡುಗಡೆಗೊಳಿಸಲಾಗಿದ್ದು, ಬುಧವಾರ ಸಂಜೆ ರಾಜ್ ಘಾಟ್ ನಲ್ಲಿರುವ ಮಹಾತ್ಮ ಗಾಂಧಿಯ ಸ್ಮಾರಕಕ್ಕೆ ತೆರಳಿದ ಅವರು, ಗಾಂಧೀಜಿಗೆ ಗೌರವ ನಮನ ಸಲ್ಲಿಸಿದರು. ನಂತರ, ನಾವು ನಮ್ಮ ಉಪವಾಸವನ್ನು ಅಂತ್ಯಗೊಳಿಸಿರುವುದಾಗಿ ಪ್ರಕಟಿಸಿದರು.
ನಾನು ನಮ್ಮ ಬೇಡಿಕೆಗಳ ಪಟ್ಟಿಯನ್ನು ಸರಕಾರಕ್ಕೆ ಸಲ್ಲಿಸಿದ್ದು, ಈ ಕುರಿತು ಉನ್ನತ ನಾಯಕತ್ವದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಸರಕಾರ ನಮಗೆ ಭರವಸೆ ನೀಡಿದೆ ಎಂದು ವಾಂಗ್ಚುಕ್ ತಿಳಿಸಿದರು.
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಲಡಾಖ್ ಪರಿಸರವನ್ನು ರಕ್ಷಿಸುವಂಥ ಸಾಂವಿಧಾನಿಕ ರಕ್ಷಣೆಯನ್ನು ಸಂವಿಧಾನದ ಆರನೆಯ ಪರಿಚ್ಛೇದದಡಿ ನೀಡಬೇಕು. ಇದರಿಂದ ಸ್ಥಳೀಯರು ಸಂಪನ್ಮೂಲಗಳನ್ನು ಬಳಸುವ ಮತ್ತು ನಿರ್ವಹಿಸುವ ಹಕ್ಕನ್ನು ಪಡೆಯಲಿದ್ದಾರೆ ಎಂದು ಮನವಿಯಲ್ಲಿ ಹೇಳಲಾಗಿದೆ” ಎಂದು ಹೇಳಿದರು.
ಇದಕ್ಕೂ ಮುನ್ನ, ಸೋನಂ ವಾಂಗ್ಚುಕ್ ಅವರನ್ನು ಬವಾನಾ ಪೊಲೀಸ್ ಠಾಣೆಯಲ್ಲಿಡಲಾಗಿತ್ತು. ಇನ್ನಿತರ ಪಾದಯಾತ್ರಿಗಳನ್ನು ದಿಲ್ಲಿ-ಹರ್ಯಾಣ ಗಡಿಯಲ್ಲಿರುವ ಇನ್ನಿತರ ಮೂರು ಠಾಣೆಗಳಲ್ಲಿ ಇರಿಸಲಾಗಿತ್ತು.