ಬೈರುತ್: ಬೈರುತ್ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಹತರಾಗುವ ಮೊದಲು ಹಿಜ್ಬುಲ್ಲಾದ ಮಾಜಿ ಮುಖ್ಯಸ್ಥ ಹಸನ್ ನಸ್ರುಲ್ಲಾ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದರು ಎಂದು ಲೆಬನಾನ್ ವಿದೇಶಾಂಗ ಸಚಿವ ಅಬ್ದುಲ್ಲಾ ಬೌ ಹಬೀಬ್ ಹೇಳಿದ್ದಾರೆ.
ಅಮೆರಿಕದ ಮಾಧ್ಯಮದ ಜೊತೆ ಮಾತನಾಡಿದ ಲೆಬನಾನ್ ವಿದೇಶಾಂಗ ಸಚಿವ ಅಬ್ದುಲ್ಲಾ ಬೌ ಹಬೀಬ್, ಕದನ ವಿರಾಮ ನಿರ್ಧಾರದ ಬಗ್ಗೆ ಅಮೆರಿಕ ಮತ್ತು ಫ್ರಾನ್ಸ್ ನ ಪ್ರತಿನಿಧಿಗಳಿಗೂ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ಲೆಬನಾನ್ ನ ಸ್ಪೀಕರ್ ನಬಿಹ್ ಬೆರ್ರಿ ಹಿಜ್ಬುಲ್ಲಾ ಜೊತೆ ಮಾತುಕತೆಯನ್ನು ನಡೆಸಿದ್ದು, ಕದನ ವಿರಾಮ ಒಪ್ಪಂದದ ಬಗ್ಗೆ ಅಮೆರಿಕ ಮತ್ತು ಫ್ರಾನ್ಸ್ ಗೆ ಹೇಳಿದ್ದೇವೆ. ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಕೂಡ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದರು ಎಂದು ಲೆಬನಾನ್ ವಿದೇಶಾಂಗ ಸಚಿವ ಅಬ್ದುಲ್ಲಾ ಬೌ ಹಬೀಬ್ ಹೇಳಿದ್ದಾರೆ.
ಸೆ.27ರಂದು ಇಸ್ರೇಲ್ ಬಾಂಬ್ ದಾಳಿ ನಡೆಸಿದಾಗ ಹಸನ್ ನಸ್ರುಲ್ಲಾ ದಕ್ಷಿಣದ ಉಪನಗರ ದಹಿಯೆಹ್ ನ ಬಂಕರ್ನಲ್ಲಿದ್ದರು. ನಸ್ರುಲ್ಲಾ ಅವರ ಸಾವನ್ನು ಹಿಜ್ಬುಲ್ಲಾ ದೃಢೀಕರಿಸಿದೆ. ಶುಕ್ರವಾರ ನಸ್ರುಲ್ಲಾ ಅವರ ಅಂತ್ಯಕ್ರಿಯೆ ನಡೆಯಲಿದೆ.