ಬೆಂಗಳೂರು : ಜಾತಿ ನಿಂದನೆ, ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ಇಲ್ಲಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನರ ‘ಪೆನ್ಡ್ರೈವ್’ನಲ್ಲಿ ಬಿಜೆಪಿ ಸೇರಿದಂತೆ ಹಲವು ರಾಜಕೀಯ ನಾಯಕರ ಖಾಸಗಿ ದೃಶ್ಯಾವಳಿರುವುದು ಬಯಲಾಗಿದೆ.
ಶಾಸಕ ಮುನಿರತ್ನರ ನಿವಾಸದ ಮೇಲೆ ದಾಳಿ ನಡೆಸಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ) ಅಧಿಕಾರಿಗಳು, ಅವರಿಗೆ ಸಂಬಂಧಿಸಿದ್ದ ಲ್ಯಾಪ್ಟಾಪ್ ಮತ್ತು ಪೆನ್ಡ್ರೈವ್ ವಶಪಡಿಸಿಕೊಂಡಿದ್ದರು. ಇದರಲ್ಲಿ ಹಲವು ಖಾಸಗಿ ವಿಡಿಯೋಗಳು ಪತ್ತೆಯಾಗಿದ್ದು, ಬಿಜೆಪಿ ಸೇರಿದಂತೆ ಕೆಲ ರಾಜಕೀಯ ನಾಯಕರ ಖಾಸಗಿ ಕ್ಷಣದ ವಿಡಿಯೋಗಳು ಇವೆ ಎಂದು ಮೂಲಗಳು ತಿಳಿಸಿವೆ.
ಸೆ.28ರಂದು ಎಸ್ಐಟಿ ಅಧಿಕಾರಿಗಳು ಮುನಿರತ್ನರ ನಿವಾಸ, ಕಚೇರಿ ಸೇರಿದಂತೆ 12ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿ ಅವರಿಗೆ ಸಂಬಂಧಿಸಿದ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದರು. ಇಲ್ಲಿನ ವೈಯಾಲಿಕಾವಲ್ನ ಮುನಿರತ್ನರ ಮನೆಯಲ್ಲಿ ಶೋಧ ಕಾರ್ಯಾಚರಣೆ ವೇಳೆ ಸಿಕ್ಕ ಲ್ಯಾಪ್ಟಾಪ್ ಮತ್ತು ಪೆನ್ಡ್ರೈವ್ ಪತ್ತೆಯಾಗಿದ್ದವು.