ಹೈದರಾಬಾದ್ : ಅನಂತಪುರದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಟೂರ್ನಮೆಂಟ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಇಂಡಿಯಾ ಡಿ ತಂಡದ ವಿರುದ್ಧ ಇಂಡಿಯಾ ಎ ತಂಡ 222 ರನ್ ಮುನ್ನಡೆ ಸಾಧಿಸುವ ಮೂಲಕ ಮೇಲುಗೈ ಸಾಧಿಸಿದೆ.
ಮೊದಲು ಫೀಲ್ಡಿಂಗ್ ಆಯ್ದುಕೊಂಡ ಇಂಡಿಯಾ ಡಿ ತಂಡವು 2ನೇ ದಿನವಾದ ಶುಕ್ರವಾರ ಇಂಡಿಯಾ ಎ ತಂಡವನ್ನು 290 ರನ್‌ಗೆ ನಿಯಂತ್ರಿಸಿತು. ಆದರೆ ತನ್ನ ಮೊದಲ ಇನಿಂಗ್ಸ್‌ನಲ್ಲಿ ಇಂಡಿಯಾ ಡಿ ತಂಡ ಕೇವಲ 55 ರನ್‌ಗೆ ಅಗ್ರ ಕ್ರಮಾಂಕದ 4 ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು. ಇದರಿಂದ ಚೇತರಿಸಿಕೊಳ್ಳುವಲ್ಲಿ ವಿಫಲವಾದ ಶ್ರೇಯಸ್ ಅಯ್ಯರ್ ಬಳಗವು ಕೇವಲ 183 ರನ್‌ಗೆ ಆಲೌಟಾಯಿತು.
ಇಂಡಿಯಾ ಡಿ ಪರ ದೇವದತ್ತ ಪಡಿಕ್ಕಲ್(92 ರನ್, 124 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು.
ಅಥರ್ವ ಟೈಡ್(4 ರನ್)ಔಟಾದಾಗ ಸನ್‌ಗ್ಲಾಸ್ ಧರಿಸಿ ಕ್ರೀಸ್‌ಗಿಳಿದ ಶ್ರೇಯಸ್ ಅಯ್ಯರ್ ಎಲ್ಲರ ಗಮನ ಸೆಳೆದರು. ಶ್ರೇಯಸ್ ಅವರು ಸನ್‌ಗ್ಲಾಸ್ ಧರಿಸಿ ಬ್ಯಾಟಿಂಗ್ ಮಾಡಿರುವ ವೀಡಿಯೊ ಅಂತರ್ಜಾಲದಲ್ಲಿ ತಕ್ಷಣವೇ ವೈರಲ್ ಆಯಿತು.
ದುರದೃಷ್ಟವಶಾತ್ ಶ್ರೇಯಸ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 7 ಎಸೆತಗಳನ್ನು ಎದುರಿಸಿದ್ದರೂ ಶೂನ್ಯಕ್ಕೆ ಔಟಾದರು. ಶ್ರೇಯಸ್ ದುಲೀಪ್ ಟ್ರೋಫಿಯಲ್ಲಿ ತನ್ನ ತಂಡ ಆಡಿರುವ ಆರಂಭಿಕ ಪಂದ್ಯದಲ್ಲಿ 9 ಹಾಗೂ 54 ರನ್ ಗಳಿಸಿದ್ದರು. ಆದರೆ ಈ ಪಂದ್ಯದಲ್ಲಿ ಇಂಡಿಯಾ ಸಿ ತಂಡ 4 ವಿಕೆಟ್‌ಗಳಿಂದ ಜಯ ಸಾಧಿಸಿತ್ತು.
ಕೂಲ್ ಸನ್‌ಗ್ಲಾಸ್‌ನೊಂದಿಗೆ ಕಾಣಿಸಿಕೊಂಡ ಶ್ರೇಯಸ್‌ರನ್ನು ಆರಂಭದಲ್ಲಿ ಹೊಗಳಿದ ಕ್ರಿಕೆಟ್ ಅಭಿಮಾನಿಗಳು ಆ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾರಂಭಿಸಿದರು.
ಇಂಡಿಯಾ ಎ ತಂಡದ ಪರ ವೇಗದ ಬೌಲರ್ ಖಲೀಲ್ ಅಹ್ಮದ್(3-39) ಹಾಗೂ ಅಕಿಬ್ ಖಾನ್(3-41) ತಲಾ ಮೂರು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಅಹ್ಮದ್ ಅವರು ಅಥರ್ವ ಹಾಗೂ ಶ್ರೇಯಸ್‌ರನ್ನು ಬೆನ್ನುಬೆನ್ನಿಗೆ ಪೆವಿಲಿಯನ್‌ಗೆ ಕಳುಹಿಸಿದರು.
ಇಂಡಿಯಾ ಎ 290 ರನ್ : ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಮಯಾಂಕ್ ಅಗರ್ವಾಲ್ ನೇತೃತ್ವದ ಇಂಡಿಯಾ ಎ ತಂಡ 290 ರನ್‌ಗೆ ಆಲೌಟಾಯಿತು. 93 ರನ್‌ಗೆ 5 ವಿಕೆಟ್ ಕಳೆದುಕೊಂಡ ಇಂಡಿಯಾ ಎ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಶಮ್ಸ್ ಮುಲಾನಿ(89 ರನ್, 187 ಎಸೆತ)ಹಾಗೂ ಆಲ್‌ರೌಂಡರ್ ತನುಶ್ ಕೋಟ್ಯಾನ್(53 ರನ್, 80 ಎಸೆತ)ಅರ್ಧಶತಕದ ಕೊಡುಗೆ ನೀಡಿ ಆಸರೆಯಾದರು. ಈ ಜೋಡಿ 7ನೇ ವಿಕೆಟ್‌ಗೆ ನೀರ್ಣಾಯಕ 91 ರನ್ ಜೊತೆಯಾಟ ನಡೆಸಿದರು.
ಹರ್ಷಿತ್ ರಾಣಾ(4-51), ವಿದ್ವತ್ ಕಾವೇರಪ್ಪ(2-30) ಹಾಗೂ ಅರ್ಷದೀಪ್ ಸಿಂಗ್(2-73) ತಮ್ಮೊಳಗೆ ಎಂಟು ವಿಕೆಟ್‌ಗಳನ್ನು ಹಂಚಿಕೊಂಡರು.
ಮೊದಲ ದಿನದಾಟದಂತ್ಯಕ್ಕೆ 2ನೇ ಇನಿಂಗ್ಸ್ ಆರಂಭಿಸಿರುವ ಇಂಡಿಯಾ ಎ ತಂಡ 1 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿದ್ದು, ಪ್ರಥಮ್ ಸಿಂಗ್(ಔಟಾಗದೆ 59)ಕ್ರೀಸ್ ಕಾಯ್ದುಕೊಂಡಿದ್ದಾರೆ. ನಾಯಕ ಮಯಾಂಕ್(56 ರನ್)ಶ್ರೇಯಸ್ ಅಯ್ಯರ್‌ಗೆ ರಿಟರ್ನ್ ಕ್ಯಾಚ್ ನೀಡಿ ಔಟಾಗಿದ್ದಾರೆ.
►ಇಂಡಿಯಾ ಸಿ 525 ರನ್
ಅನಂತಪುರದಲ್ಲಿ ನಡೆಯುತ್ತಿರುವ ಮತ್ತೊಂದು ದುಲೀಪ್ ಟ್ರೋಫಿಯ 2ನೇ ಸುತ್ತಿನ ಪಂದ್ಯದಲ್ಲಿ ಇಂಡಿಯಾ ಸಿ ತಂಡ ಇಂಡಿಯಾ ಬಿ ತಂಡದ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 525 ರನ್ ಕಲೆ ಹಾಕಿದೆ.
ಶುಕ್ರವಾರ 5 ವಿಕೆಟ್ ನಷ್ಟಕ್ಕೆ 357 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಇಂಡಿಯಾ ಸಿ ತಂಡದ ಪರ ಮಾನವ್ ಸುಥಾರ್(82 ರನ್, 156 ಎಸೆತ) ಹಾಗೂ ಋತುರಾಜ್ ಗಾಯಕ್ವಾಡ್(58 ರನ್, 74 ಎಸೆತ)ಅರ್ಧಶತಕ ಗಳಿಸಿ ಮೊತ್ತವನ್ನು ಹಿಗ್ಗಿಸಿದರು.
ಇಂಡಿಯಾ ಬಿ ಪರ ರಾಹುಲ್ ಚಹಾರ್(4-73)ಹಾಗೂ ಮುಕೇಶ್ ಕುಮಾರ್(4-126)ತಲಾ 4 ವಿಕೆಟ್‌ಗಳನ್ನು ಪಡೆದರು.
ಇಂಡಿಯಾ ಸಿ ಪರ ಗುರುವಾರ ಮೊದಲ ದಿನದಾಟದಲ್ಲಿ ಇಶಾನ್ ಕಿಶನ್(111 ರನ್) ಶತಕ ಗಳಿಸಿದರೆ, ಬಾಬಾ ಅಪರಾಜಿತ್(78 ರನ್)ಅರ್ಧಶತಕ ಗಳಿಸಿದರು.
ತನ್ನ ಮೊದಲ ಇನಿಂಗ್ಸ್ ಆರಂಭಿಸಿರುವ ಇಂಡಿಯಾ ಬಿ ತಂಡ ವಿಕೆಟ್ ನಷ್ಟವಿಲ್ಲದೆ 124 ರನ್ ಗಳಿಸಿದ್ದು, ಜಗದೀಶನ್(67 ರನ್) ಹಾಗೂ ನಾಯಕ ಅಭಿಮನ್ಯು ಈಶ್ವರನ್(51 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ.