ಕಠ್ಮಂಡು (ನೇಪಾಳ): ಎಸಿಸಿ ಪ್ರೀಮಿಯರ್ ಕಪ್ 2024 ಪಂದ್ಯಾವಳಿಯಲ್ಲಿ, ಖತರ್ ವಿರುದ್ಧದ ಟ್ವೆಂಟಿ20 ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ನೇಪಾಳದ ದೀಪೇಂದ್ರ ಸಿಂಗ್ ಐರೀ ಒಂದು ಓವರ್ ನಲ್ಲಿ ಆರು ಸಿಕ್ಸರ್ ಗಳನ್ನು ಸಿಡಿಸುವ ಮೂಲಕ ಇತಿಹಾಸ ಪುಸ್ತಕಕ್ಕೆ ಸೇರ್ಪಡೆಗೊಂಡಿದ್ದಾರೆ.
ಟ್ವೆಂಟಿ20 ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲಿ ಓವರೊಂದರಲ್ಲಿ ಆರು ಸಿಕ್ಸರ್ ಗಳನ್ನು ಬಾರಿಸಿದ ಮೂರನೇ ಆಟಗಾರ ಅವರಾದರು. ಇದಕ್ಕೂ ಮೊದಲು, ಈ ಸಾಧನೆಯನ್ನು ಭಾರತದ ಯುವರಾಜ್ ಸಿಂಗ್ ಮತ್ತು ವೆಸ್ಟ್ ಇಂಡೀಸ್ನ ಕೀರನ್ ಪೊಲಾರ್ಡ್ ಮಾಡಿದ್ದಾರೆ.
2023ರಲ್ಲಿ ನಡೆದ ಏಶ್ಯನ್ ಗೇಮ್ಸ್ ನಲ್ಲಿ, ಮಂಗೋಲಿಯ ವಿರುದ್ಧದ ಟ್ವೆಂಟಿ20 ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಐರೀ ಸತತ ಆರು ಎಸೆತಗಳಲ್ಲಿ ಸಿಕ್ಸರ್ ಗಳನ್ನು ಬಾರಿಸಿದ್ದರು. ಆದರೆ, ಆ ಸಿಕ್ಸರ್ ಗಳು ಎರಡು ಬೇರೆ ಬೇರೆ ಓವರ್ಗಳಲ್ಲಿ ಬಂದಿದ್ದವು.
ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಐರೀ, 21 ಎಸೆತಗಳಲ್ಲಿ 64 ರನ್ಗಳನ್ನು ಸಿಡಿಸಿ ಅಜೇಯವಾಗಿ ಉಳಿದರು. ಅವರ ಇನಿಂಗ್ಸ್ ನಲ್ಲಿ 7 ಸಿಕ್ಸರ್ ಗಳು ಮತ್ತು ಮೂರು ಬೌಂಡರಿಗಳಿದ್ದವು. ಅವರು ಕಮ್ರಾನ್ ಖಾನ್ರ ಓವರ್ ನಲ್ಲಿ ಆರು ಸಿಕ್ಸರ್ ಗಳನ್ನು ಸಿಡಿಸಿದರು. ನೇಪಾಳವು 20 ಓವರ್ ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 210 ರನ್ಗಳನ್ನು ಕಲೆ ಹಾಕಿತು. ಇದಕ್ಕೆ ಉತ್ತರವಾಗಿ ಖತರ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 178 ರನ್ಗಳನ್ನು ಗಳಿಸಿತು. ಆ ಮೂಲಕ ನೇಪಾಳವು ಪಂದ್ಯವನ್ನು 32 ರನ್ಗಳಿಂದ ಗೆದ್ದಿತು.