ಇಸ್ಲಾಮಾಬಾದ್: ಶೆಹಬಾಝ್ ಷರೀಫ್ ಅವರು ರವಿವಾರ ಎರಡನೇ ಅವಧಿಗೆ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಅವರ ಸೋದರ ನವಾಝ್ ಷರೀಫ್ ಅವರು ನಾಲ್ಕನೇ ಬಾರಿಗೆ ಪ್ರಧಾನಿಯಾಗಲು ನಿರಾಕರಿಸಿದ ಬಳಿಕ ಶೆಹಬಾಝ್ ಪ್ರಧಾನಿ ಹುದ್ದೆಗೇರಿದ್ದಾರೆ. ಪ್ರತಿಸ್ಪರ್ಧಿ ಇಮ್ರಾನ್ ಖಾನ್ ಪದಚ್ಯುತಿಯ ಬಳಿಕ 16 ತಿಂಗಳುಗಳ ಕಾಲ ವಿಭಿನ್ನ ಮೈತ್ರಿಕೂಟವನ್ನು ಕಾಯ್ದುಕೊಳ್ಳುವಲ್ಲಿ ಶೆಹಬಾಝ್ ನಿರ್ಣಾಯಕ ಪಾತ್ರವನ್ನು ವಹಿಸಿದ್ದರು.
ಪ್ರಧಾನಿ ಹುದ್ದೆಗಾಗಿ ಸಂಸತ್ತಿನ ಮತವನ್ನು ಗೆದ್ದಿರುವ ಶೆಹಬಾಝ್ (72) ಕಳೆದ ತಿಂಗಳ ಚುನಾವಣೆಗೆ ಮುನ್ನ ಆಗಸ್ಟ್‌ನಲ್ಲಿ ಸಂಸತ್ತು ವಿಸರ್ಜನೆಗೊಳ್ಳುವವರೆಗೂ ಪ್ರಧಾನಿಯಾಗಿದ್ದರು. ಅಂದಿನಿಂದ ಪಾಕಿಸ್ತಾನವು ಉಸ್ತುವಾರಿ ಸರಕಾರವನ್ನು ಹೊಂದಿತ್ತು.