EBM News Kannada
Leading News Portal in Kannada

ಕ್ಷಮಾದಾನವನ್ನು ರದ್ದುಗೊಳಿಸುವ ಮೂಲಕ ನ್ಯಾಯಾಂಗ ಸಮರ್ಪಕತೆಯನ್ನು ಉಲ್ಲಂಘಿಸಲಾಗಿದೆ: ಸುಪ್ರೀಂ ಕೋರ್ಟ್ ಗೆ ಮೊರೆ ಹೋದ ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿ

0


ಹೊಸದಿಲ್ಲಿ: ತನಗೆ ನೀಡಿದ್ದ ಕ್ಷಮಾದಾನವನ್ನು ರದ್ದುಗೊಳಿಸಿರುವುದು ಹಾಗೂ ಎಲ್ಲ 11 ಮಂದಿ ಅಪರಾಧಿಗಳನ್ನು ಮತ್ತೆ ಸೆರೆವಾಸಕ್ಕೆ ಕಳಿಸಿರುವುದು ನ್ಯಾಯಾಂಗದ ದೃಷ್ಟಿಯಿಂದ ಅಸಮರ್ಪಕತೆಯಾಗಿದೆ ಎಂದು ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳಲ್ಲೊಬ್ಬನಾದ ರಾಧೇಶ್ಯಾಮ್ ಭಗವಾನ್ ದಾಸ್ ಶಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾನೆ.

ಸುಪ್ರೀಂ ಕೋರ್ಟ್ ಗೆ ಶಾ ಸಲ್ಲಿಸಿರುವ ಅರ್ಜಿಯಲ್ಲಿ ನ್ಯಾ. ರಸ್ತೋಗಿ ನೇತೃತ್ವದ ದ್ವಿಸದಸ್ಯ ಪೀಠ ನೀಡಿದ್ದ ತೀರ್ಪನ್ನು ನ್ಯಾ. ಬಿ.ವಿ.ನಾಗರತ್ನ ಹಾಗೂ ನ್ಯಾ. ಉಜ್ಜಲ್ ಭುಯನ್ ನೇತೃತ್ವದ ನ್ಯಾಯಪೀಠವು ರದ್ದುಗೊಳಿಸಿರುವುದರಿಂದ ಈ ವಿಷಯದ ಕುರಿತು ವಿಸ್ತೃತ ನ್ಯಾಯಪೀಠದಲ್ಲಿ ವಿಚಾರಣೆ ನಡೆಸಬೇಕಿತ್ತು ಎಂದು ವಾದಿಸಲಾಗಿದೆ.

ತಮ್ಮ ವಕೀಲ ರಿಷಿ ಮಲ್ಹೋತ್ರಾ ಮೂಲಕ ಶಾ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ಎದುರು ಸಲ್ಲಿಸಿದ್ದಾರೆ. ಕಾನೂನಿನ ಪ್ರಕಾರ, ದ್ವಿಸದಸ್ಯ ಪೀಠದ ನ್ಯಾಯಾಧೀಶರಾದ ಅಜಯ್ ರಸ್ತೋಗಿ ಹಾಗೂ ವಿಕ್ರಮ್ ನಾಥ್ ಅವರು ನೀಡಿದ್ದ ತೀರ್ಪನ್ನು ನ್ಯಾ. ನಾಗರತ್ನ ನೇತೃತ್ವದ ದ್ವಿಸದಸ್ಯ ಪೀಠವು ರದ್ದುಗೊಳಿಸುವುದು ತಪ್ಪಾಗಿದೆ ಎಂದು ತಮ್ಮ ಅರ್ಜಿಯಲ್ಲಿ ಶಾ ವಾದಿಸಿದ್ದಾರೆ.

ಈ ಕುರಿತು TNIE ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ವಕೀಲ ಮಲ್ಹೋತ್ರಾ, ಅಪರಾಧಿಗಳ ಅವಧಿಪೂರ್ವ ಬಿಡುಗಡೆ ಮನವಿಯನ್ನು ಮರು ಪರಿಗಣಿಸಬೇಕು ಎಂದು ಮನವಿ ಮಾಡಲಾಗಿದೆ. ಎರಡು ನ್ಯಾಯಪೀಠಗಳ ತೀರ್ಪುಗಳ ಪೈಕಿ ಯಾವ ನ್ಯಾಯಪೀಠದ ತೀರ್ಪು ಊರ್ಜಿತ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸುವವರೆಗೂ, ಶಾಗೆ ಜಾಮೀನು ಮಂಜೂರು ಮಾಡಬೇಕು ಎಂದೂ ಅವರು ಮನವಿ ಮಾಡಿದ್ದಾರೆ.

“ನ್ಯಾ. ನಾಗರತ್ನ ಹಾಗೂ ನ್ಯಾ. ಭುಯಾನ್ ಅವರನ್ನೊಳಗೊಂಡ ನ್ಯಾಯಪೀಠವು ಜನವರಿ 8ರಂದು ನೀಡಿರುವ ತೀರ್ಪು ಕೇವಲ ನ್ಯಾಯಾಂಗ ಅಸಮರ್ಪಕತೆಯ ಪ್ರಕರಣ ಮಾತ್ರವಾಗಿರದೆ, ಭವಿಷ್ಯದಲ್ಲಿ ಯಾವ ನ್ಯಾಯಪೀಠದ ತೀರ್ಪನ್ನು ಪೂರ್ವ ನಿದರ್ಶನವನ್ನಾಗಿ ಬಳಸಬೇಕು ಎಂಬ ಬಗ್ಗೆ ಅನಿಶ್ಚಿತತೆ ಮತ್ತು ಗೊಂದಲವನ್ನು ಸೃಷ್ಟಿಸಲಿದೆ” ಎಂದೂ ಸುಪ್ರೀಂ ಕೋರ್ಟ್ ಎದುರು ಶಾ ಸಲ್ಲಿಸಿರುವ ಅರ್ಜಿಯಲ್ಲಿ ವಾದಿಸಲಾಗಿದೆ.

ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಆಗಸ್ಟ್ 15, 2022ರಂದು ಗುಜರಾತ್ ಸರಕಾರ ಮಂಜೂರು ಮಾಡಿದ್ದ ಕ್ಷಮಾದಾನವನ್ನು ಜನವರಿ 8, 2024ರ ತನ್ನ ಐತಿಹಾಸಿಕ ತೀರ್ಪಿನಲ್ಲಿ ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್, ಜನವರಿ 21ರೊಳಗೆ ಎಲ್ಲ ಅಪರಾಧಿಗಳು ಶರಣಾಗಬೇಕು ಎಂದು ಆದೇಶಿಸಿತ್ತು.

Leave A Reply

Your email address will not be published.