ಹೊಸದಿಲ್ಲಿ: ಖ್ಯಾತ ಚೆಫ್ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಧಕ ಇಮ್ತಿಯಾಝ್ ಖುರೇಷಿ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಸಾಂಪ್ರದಾಯಿಕ ಶೈಲಿಯ ದಮ್ ಪುಖ್ತ್ ಪಾಕಶಾಸ್ತ್ರವನ್ನು ಪುನರುಜ್ಜೀವನಗೊಳಿಸಿದ್ದ ಇಮ್ತಿಯಾಝ್ ಖುರೇಷಿ, ಬುಖಾರಾ ಹಾಗೂ ದಮ್ ಪುಖ್ತ್‌ನಂಥ ರೆಸ್ಟೋರೆಂಟ್‌ಗಳನ್ನು ಸ್ಥಾಪಿಸಿದ್ದರು. ಇಮ್ತಿಯಾಝ್ ಖುರೇಷಿ ಐವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರೆಲ್ಲರೂ ಬಾಣಸಿಗ ವೃತ್ತಿಯಲ್ಲೇ ತೊಡಗಿಸಿಕೊಂಡಿದ್ದು, ಭಾರತ ಮತ್ತು ವಿದೇಶಗಳಲ್ಲಿ ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ.
ಇಮ್ತಿಯಾಝ್ ಖುರೇಷಿ ಅವರು ಪಾಕ ಪ್ರಾವೀಣ್ಯತೆಯನ್ನು ಗುರುತಿಸಿದ ಐಟಿಸಿ ಹೋಟೆಲ್ಸ್‌ನ ಸಂಸ್ಥಾಪಕ ಅಜಿತ್ ಹಕ್ಸರ್, 1970ರ ದಶಕದಲ್ಲಿ ತಮ್ಮ ಸಂಸ್ಥೆಗೆ ಅವರನ್ನು ನೇಮಕ ಮಾಡಿಕೊಂಡಿದ್ದರು. ತಮ್ಮ ಪಾಕ ಪ್ರಾವೀಣ್ಯತೆಯಿಂದ ಕೆಲವೇ ದಿನಗಳಲ್ಲಿ ಮನೆ ಮಾತಾದ ಇಮ್ತಿಯಾಝ್, ತಾನು ಅಡುಗೆ ತಯಾರಿಸಲು ಬಳಸುತ್ತಿದ್ದ ಸಾಂಪ್ರದಾಯಿಕ ದಮ್ ಪುಖ್ತ್ ಶೈಲಿಯ ಹೆಸರನ್ನೇ ತನ್ನ ರೆಸ್ಟೋರೆಂಟ್‌ಗೂ ನಾಮಕರಣ ಮಾಡಿ, ಅದನ್ನು ಯಶಸ್ವಿಯಾಗಿ ನಡೆಸಿದರು. ಇದರಿಂದ ಸಾಕಷ್ಟು ಖ್ಯಾತಿ ಹಾಗೂ ಮನ್ನಣೆ ಪಡೆದ ಇಮ್ತಿಯಾಝ್ ಖುರೇಷಿ ಅವರಿಗೆ 2016ರಲ್ಲಿ ದೇಶದ ನಾಲ್ಕನೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಯನ್ನು ಪ್ರದಾನ ಮಾಡಿ ಪುರಸ್ಕರಿಸಲಾಗಿತ್ತು.