EBM News Kannada
Leading News Portal in Kannada

ಫಿಲಿಪ್ಪೀನ್ಸ್‌ನಲ್ಲಿ ಪ್ರಬಲ ಬಾಂಬ್‌ಸ್ಫೋಟ: 4 ಮಂದಿ ಮೃತ್ಯು; ಕನಿಷ್ಟ 50 ಮಂದಿಗೆ ಗಾಯ

0



ಮನಿಲಾ: ದಂಗೆ ಬಾಧಿತ ದಕ್ಷಿಣ ಫಿಲಿಪ್ಪೀನ್‌ನಲ್ಲಿ ರವಿವಾರ ಪ್ರಾರ್ಥನೆಗೆ ಸೇರಿದ್ದ ಕ್ಯಾಥೊಲಿಕ್ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿ ನಡೆದ ಬಾಂಬ್ ದಾಳಿಯಲ್ಲಿ ಕನಿಷ್ಟ 4 ಮಂದಿ ಮೃತಪಟ್ಟಿದ್ದು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ದಕ್ಷಿಣ ಫಿಲಿಪ್ಪೀನ್ಸ್‌ನ ಲನಾವೊ ಡೆಲ್‌ಸುರ್ ಪ್ರಾಂತದ ರಾಜಧಾನಿ ಮರಾವಿ ನಗರದ ಯುನಿವರ್ಸಿಟಿ ಜಿಮ್‌ನಲ್ಲಿ ಬಾಂಬ್ ಸ್ಫೋಟಿಸಿದೆ. ಈ ನಗರವನ್ನು ಐಸಿಸ್ ಜತೆ ಸಂಪರ್ಕದಲ್ಲಿರುವ ಬಂಡುಗೋರ ಸಶಸ್ತ್ರ ಹೋರಾಟಗಾರರ ಗುಂಪು 2017ರಲ್ಲಿ 5 ತಿಂಗಳು ವಶಪಡಿಸಿಕೊಂಡಿತ್ತು. ಕಳೆದ ತಿಂಗಳು ಈ ಪ್ರದೇಶದಲ್ಲಿ ಸೇನೆ ನಿರಂತರ ಕಾರ್ಯಾಚರಣೆ ನಡೆಸಿ ಬಂಡುಗೋರ ಪಡೆಯ ಮುಖ್ಯಸ್ಥನನ್ನು ಹತ್ಯೆ ಮಾಡಿತ್ತು.

ಇದಕ್ಕೆ ಪ್ರತೀಕಾರವಾಗಿ ನಡೆದ ದಾಳಿ ಇದಾಗಿರಬಹುದು. ಪೊಲೀಸ್ ಠಾಣೆಗಳು ಹಾಗೂ ಚೆಕ್‌ಪೋಸ್ಟ್‌ಗಳನ್ನು ಗರಿಷ್ಟ ಎಚ್ಚರಿಕೆಯ ಸ್ಥಿತಿಯಲ್ಲಿರಿಸಲಾಗಿದ್ದು ಬಂದರುಗಳು ಹಾಗೂ ಕರಾವಳಿ ತೀರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸಶಸ್ತ್ರ ಪಡೆಗಳ ಮುಖ್ಯಸ್ಥ ರೋಮಿಯೊ ಬ್ರಾವ್ನರ್ ಹೇಳಿದ್ದಾರೆ. ಮುಂದಿನ ಸೂಚನೆಯವರೆಗೆ ತರಗತಿಗಳನ್ನು ಅಮಾನತುಗೊಳಿಸಿರುವುದಾಗಿ ಯುನಿವರ್ಸಿಟಿ ಪ್ರಕಟಣೆ ತಿಳಿಸಿದೆ. ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜ್ಯೂ. ಬಾಂಬ್ ದಾಳಿಯನ್ನು ಖಂಡಿಸಿದ್ದು ವಿದೇಶಿ ಉಗ್ರರು ಈ ಸ್ಫೋಟ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

Leave A Reply

Your email address will not be published.