ವಾಷಿಂಗ್ಟನ್: ಗ್ರೀನ್ಕಾರ್ಡ್ ಬ್ಯಾಕ್ಲಾಗ್ ಗಳನ್ನು ಸರಾಗಗೊಳಿಸುವ ಉದ್ದೇಶದ ʼವಲಸೆಗಾರರ ವೀಸಾ ತಿದ್ದುಪಡಿ ಮಸೂದೆ’ಯನ್ನು ಅಮೆರಿಕ ಸಂಸತ್ನ ಕೆಳಮನೆ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ನಲ್ಲಿ ಮಂಡಿಸಲಾಗಿದ್ದು ಇದರಿಂದ ಭಾರತೀಯರಿಗೆ ಪ್ರಯೋಜನವಾಗಲಿದೆ.
ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಗಳ ಮೇಲೆ ಪ್ರತೀ ದೇಶಕ್ಕೆ ವಿಧಿಸಲಾಗಿರುವ ಮಿತಿಗಳನ್ನು ತೆಗೆದುಹಾಕುವ ಮತ್ತು ಕುಟುಂಬ ಆಧಾರಿತ ಗ್ರೀನ್ ಕಾರ್ಡ್ ಮಿತಿಯನ್ನು ಹೆಚ್ಚಿಸುವ ಉದ್ದೇಶದ ಈ ಮಸೂದೆಯನ್ನು ಭಾರತೀಯ ಅಮೆರಿಕನ್ ಸಂಸದರಾದ ಪ್ರಮೀಳಾ ಜಯಪಾಲ್ ಮತ್ತು ರಾಜಾ ಕೃಷ್ಣಮೊ ಹಾಗೂ ಸಂಸದ ರಿಚ್ ಮೆಕಾರ್ಮಿಕ್ ಮಂಡಿಸಿದ್ದಾರೆ.
ಎಚ್ಆರ್6542 ಎಂದು ಕರೆಯಲ್ಪಡುವ ಮಸೂದೆಯು ಗ್ರೀನ್ ಕಾರ್ಡ್ ಅರ್ಜಿದಾರರ ದೀರ್ಘಾವಧಿ ಬ್ಯಾಕ್ ಲಾಗ್(ಹಿಂದಿನ ವರ್ಷದಿಂದಲೂ ಉಳಿದುಕೊಂಡು ಬಂದಿರುವ) ಅನ್ನು ಪರಿಹರಿಸುವ ಗುರಿಯನ್ನು ಹೊಂದಿದ್ದು ವಿಶೇಷವಾಗಿ ಭಾರತ ಮತ್ತು ಚೀನಾದ ಅರ್ಜಿದಾರರಿಗೆ ಪ್ರಯೋಜನವಾಗಲಿದೆ. ಗ್ರೀನ್ ಕಾರ್ಡ್ ಬ್ಯಾಕ್ ಲಾಗ್ ಚಕ್ರವ್ಯೂಹದಲ್ಲಿ ಸಿಲುಕಿರುವ 1.2 ದಶಲಕ್ಷಕ್ಕೂ ಅಧಿಕ ಉನ್ನತ ನುರಿತ ವಲಸಿಗರಿಗೆ ಈ ಮಸೂದೆ ಪರಿಹಾರ ನೀಡಲಿದೆ ಎಂದು ವಲಸಿಗರಿಗೆ ಕಾನೂನು ಸಲಹೆ ಒದಗಿಸುತ್ತಿರುವ ʼಇಮಿಗ್ರೇಷನ್ ವಾಯ್ಸ್’ ಹೇಳಿದೆ.