ಹೊಸದಿಲ್ಲಿ: ಇತ್ತೀಚಿಗಷ್ಟೇ ವಿಧಾನಸಭಾ ಚುನಾವಣೆ ನಡೆದ ಮಧ್ಯಪ್ರದೇಶದಲ್ಲಿಯ ಗ್ರಾಮೀಣ ಕೃಷಿ ಕಾರ್ಮಿಕರು ದೇಶದಲ್ಲಿಯೇ ಕನಿಷ್ಠ ದಿನಗೂಲಿಯನ್ನು ಪಡೆಯುತ್ತಿದ್ದು,ಇದು ರಾಷ್ಟ್ರೀಯ ಸರಾಸರಿಯ ಹತ್ತಿರದಲ್ಲೂ ಇಲ್ಲ.
ಆರ್ಬಿಐ ದತ್ತಾಂಶಗಳಂತೆ, ಮಾರ್ಚ್ 2023ಕ್ಕೆ ಅಂತ್ಯಗೊಂಡ ವರ್ಷದಲ್ಲಿ ಮಧ್ಯಪ್ರದೇಶದ ಗಾಮೀಣ ಪ್ರದೇಶಗಳ ಪುರುಷ ಕೃಷಿ ಕಾರ್ಮಿಕರು 229.20 ರೂ.ಗಳ ದಿನಗೂಲಿಯನ್ನು ಪಡೆದಿದ್ದರೆ, ಮಾದರಿ ರಾಜ್ಯವೆಂದು ಹೇಳಿಕೊಳ್ಳುತ್ತಿರುವ ಗುಜರಾತಿನಲ್ಲಿ ಇದು 241.90 ರೂ.ಆಗಿತ್ತು. ಇದೇ ಅವಧಿಯಲ್ಲಿ ರಾಷ್ಟ್ರೀಯ ಸರಾಸರಿ 345.70 ರೂ.ಆಗಿತ್ತು ಎಂದು indianexpress.com ವರದಿ ಮಾಡಿದೆ.
ಮಧ್ಯಪ್ರದೇಶದಲ್ಲಿ ಗ್ರಾಮೀಣ ಕೃಷಿ ಕಾರ್ಮಿಕನೋರ್ವ ತಿಂಗಳಲ್ಲಿ 25 ದಿನಗಳ ಕೆಲಸ ಪಡೆದರೆ ಆತನ ಮಾಸಿಕ ಆದಾಯ ಸುಮಾರು 5,730 ರೂ.ಆಗುತ್ತದೆ. ಇದು ನಾಲ್ಕೈದು ಜನರಿರುವ ಕುಟುಂಬದ ಗೃಹವೆಚ್ಚಗಳನ್ನು ನಿಭಾಯಿಸಲೂ ಸಾಕಾಗದಿರಬಹುದು. ಅದೇ ಕೇರಳದಲ್ಲಿಯ ಗ್ರಾಮೀಣ ಕೃಷಿ ಕಾರ್ಮಿಕ ತಿಂಗಳಲ್ಲಿ 25 ದಿನ ದುಡಿದರೆ ಸರಾಸರಿ 19,107 ರೂ.ಗಳ ಮಾಸಿಕ ಆದಾಯ ಗಳಿಸುತ್ತಾನೆ. ಕೇರಳ ದೇಶದಲ್ಲಿಯೇ ಅತ್ಯಂತ ಹೆಚ್ಚಿನ ದಿನಗೂಲಿ (764.3 ರೂ.) ನೀಡುವ ರಾಜ್ಯವಾಗಿದೆ. ಗುಜರಾತಿನಲ್ಲಿ ಕೃಷಿ ಕಾರ್ಮಿಕನೋರ್ವ ತಿಂಗಳಿಗೆ 6,047 ರೂ.ಆದಾಯ ಗಳಿಸುತ್ತಾನೆ.
ರೇಟಿಂಗ್ ಸಂಸ್ಥೆ ಕ್ರಿಸಿಲ್ನ ಲೆಕ್ಕಾಚಾರದ ಪ್ರಕಾರ ಈ ವರ್ಷದ ಸೆಪ್ಟಂಬರ್ನಲ್ಲಿ ಸಸ್ಯಾಹಾರ ಥಾಲಿಯ ದರ 27.9 ರೂ.ಆಗಿದ್ದರೆ ಮಾಂಸಾಹಾರ ಥಾಲಿಯ ದರ 61.4 ರೂ.ಇತ್ತು. ಅಂದರೆ ಐವರ ಕುಟುಂಬವೊಂದು ಎರಡು ಹೊತ್ತಿನ ಸಸ್ಯಾಹಾರ ಥಾಲಿಗೆ ದಿನಕ್ಕೆ 280 ರೂ. ಅಥವಾ ತಿಂಗಳಿಗೆ 8,400 ರೂ.ಗಳನ್ನು ವ್ಯಯಿಸಬೇಕು.
ಉತ್ತರ ಪ್ರದೇಶ ಮತ್ತು ಒಡಿಶಾದಲ್ಲಿ ಕೃಷಿ ಕಾರ್ಮಿಕರು ಅನುಕ್ರಮವಾಗಿ 309.3 ರೂ. ಮತ್ತು 285.1 ರೂ. ದಿನಗೂಲಿಯನ್ನು ಪಡೆದಿದ್ದರು.
ಅತ್ಯಂತ ಮುಂದುವರಿದಿರುವ ಕೈಗಾರಿಕಾ ರಾಜ್ಯ ಎಂದು ಹೇಳಿಕೊಳ್ಳುವ ಮಹಾರಾಷ್ಟ್ರದಲ್ಲಿ ಪುರುಷ ಕೃಷಿ ಕಾರ್ಮಿಕರಿಗೆ ದಕ್ಕಿದ್ದ ದಿನಗೂಲಿ 303.5 ರೂ.ಮಾತ್ರ.
ಕೇರಳದಲ್ಲಿಯ ಅತ್ಯಂತ ಹೆಚ್ಚಿನ ದಿನಗೂಲಿಯು ಇತರ ರಾಜ್ಯಗಳ ಕೃಷಿ ಕಾರ್ಮಿಕರನ್ನು ಆಕರ್ಷಿಸಿದ್ದು,ಇಂದು ಸುಮಾರು 25 ಲಕ್ಷ ವಲಸೆ ಕಾರ್ಮಿಕರು ಕೇರಳದಲ್ಲಿ ಬದುಕು ಸಾಗಿಸುತ್ತಿದ್ದಾರೆ.
ಜಮ್ಮು-ಕಾಶ್ಮೀರ,ಹಿಮಾಚಲ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಕೃಷಿ ಕಾರ್ಮಿಕರು ಅನುಕ್ರಮವಾಗಿ 550.4 ರೂ.,473.3 ರೂ. ಮತ್ತು 470 ರೂ. ದಿನಗೂಲಿಯನ್ನು ಪಡೆಯುತ್ತಿದ್ದಾರೆ.
ಆರ್ಬಿಐ ದತ್ತಾಂಶಗಳಂತೆ ಪುರುಷ ಕೃಷಿಯೇತರ ಕಾರ್ಮಿಕರು ಮಧ್ಯಪ್ರದೇಶದಲ್ಲಿ ಸರಾಸರಿ 246.3 ರೂ.,ಗುಜರಾತಿನಲ್ಲಿ 273.1ರೂ.ಮತ್ತು ತ್ರಿಪುರದಲ್ಲಿ 280.6 ರೂ.ದಿನಗೂಲಿ ಪಡೆಯುತ್ತಿದ್ದಾರೆ. ಇದು ರಾಷ್ಟ್ರೀಯ ಸರಾಸರಿ (348 ರೂ.)ಗಿಂತ ಕಡಿಮೆಯಾಗಿದೆ. ಈ ಕ್ಷೇತ್ರದಲ್ಲಿಯೂ ಕೇರಳವು ಮತ್ತೆ ಮುಂಚೂಣಿಯಲ್ಲಿದೆ. ಮಾರ್ಚ್ 2023ಕ್ಕೆ ಅಂತ್ಯಗೊಂಡ ವರ್ಷದಲ್ಲಿ ಅಲ್ಲಿ ಕೃಷಿಯೇತರ ಕಾರ್ಮಿಕರು 696.6 ರೂ.ದಿನಗೂಲಿ ಗಳಿಸಿದ್ದರೆ, ನಂತರದ ಸ್ಥಾನಗಳಲ್ಲಿ ಜಮ್ಮು-ಕಾಶ್ಮೀರ (517.9 ರೂ.),ತಮಿಳುನಾಡು (481.5 ರೂ.) ಮತ್ತು ಹರ್ಯಾಣ (451 ರೂ.) ರಾಜ್ಯಗಳಿವೆ.
ಇನ್ನು ಗ್ರಾಮೀಣ ಪುರುಷ ಕಟ್ಟಡ ಕಾರ್ಮಿಕರ ವಿಷಯಕ್ಕೆ ಬಂದರೆ ಇಲ್ಲಿಯೂ ಮಧ್ಯಪ್ರದೇಶ ಮತ್ತು ಗುಜರಾತ್ ಕನಿಷ್ಠ ಸ್ಥಾನಗಳಲ್ಲಿವೆ. ರಾಷ್ಟ್ರೀಯ ಸರಾಸರಿಯು 393.3 ರೂ.ಆಗಿದ್ದರೆ ಗುಜರಾತಿನಲ್ಲಿ 323.2 ರೂ.,ಮಧ್ಯಪ್ರದೇಶದಲ್ಲಿ 278.7 ರೂ. ಮತ್ತು ತ್ರಿಪುರಾದಲ್ಲಿ 286.1 ರೂ.ಆಗಿತ್ತು.
ಆದರೆ ಆರ್ಬಿಐ ದತ್ತಾಂಶಗಳಂತೆ ಮಾ.2023ಕ್ಕೆ ಅಂತ್ಯಗೊಂಡ ವರ್ಷದಲ್ಲಿ ಗ್ರಾಮೀಣ ಪುರುಷ ಕಟ್ಟಡ ಕಾರ್ಮಿಕರ ದಿನಗೂಲಿ ಕೇರಳದಲ್ಲಿ 852.5 ರೂ.,ಜಮ್ಮು-ಕಾಶ್ಮೀರದಲ್ಲಿ 534.5 ರೂ.,ತಮಿಳುನಾಡಿನಲ್ಲಿ 500.9 ರೂ. ಮತ್ತು ಹಿಮಾಚಲ ಪ್ರದೇಶದಲ್ಲಿ 498.3 ರೂ.ಆಗಿತ್ತು.