ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲು ಟೌನ್ ಹಾಲ್ ಬಳಿ ಆಗಮಿಸಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದರು.
ವಾಟಾಳ್ ನಾಗರಾಜ್ ಅವರ ಜೊತೆ ಹಲವು ಕನ್ನಡ ಪರ ಸಂಘಟನೆಗಳ ಮುಖಂಡರನ್ನು ಕೂಡ ಪೊಲೀಸರು ವಶಕ್ಕೆ ಪಡೆದು ಬಿಎಂಟಿಸಿ ಬಸ್ ನಲ್ಲಿ ಫ್ರೀಡಂ ಪಾರ್ಕ್ ಗೆ ಕರೆದೊಯ್ದಿದ್ದಾರೆ.�
ಇದಕ್ಕೂ ಮುನ್ನ ಡಾಲರ್ಸ್ ಕಾಲನಿ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, ʼʼಇವತ್ತು ಎರಡು ಬಂದ್ ನಡೆಯುತ್ತಿದೆ. ನಾವು ಕಾವೇರಿಗಾಗಿ (Cauvery) ಬಂದ್‌ಗೆ ಕರೆ ನೀಡಿದರೆ ಸರ್ಕಾರ ನಮ್ಮ ಪ್ರತಿಭಟನೆಯನ್ನು ಬಂದ್ ಮಾಡುತ್ತಿದೆ. ಸರ್ಕಾರ ಕಾವೇರಿ ಸಮಸ್ಯೆಯನ್ನು ಅರ್ಥಮಾಡಿಕೊಂಡಿಲ್ಲʼʼ ಎಂದು ಆಕ್ರೋಶ ಹೊರಹಾಕಿದ್ದಾರೆ.�
ಇನ್ನು ʼಕರ್ನಾಟಕ ಬಂದ್ʼ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಪೊಲೀಸರು, ಹಲವು ಸಂಘಟನೆಗಳ ಹೋರಾಟಗಾರರಿಗೆ ಗುರುವಾರವೇ ಎಚ್ಚರಿಕೆಯ ನೋಟಿಸ್ ನೀಡಿದ್ದರು.�