ಮೀರಠ್: ಅಕ್ಷರ ಜಗತ್ತಿಗೂ, 92 ವರ್ಷದ ಸಲೀಮಾ ಖಾನ್ ಎಂಬ ಅಜ್ಜಿಗೂ ಹಲವು ದಶಕಗಳಿಂದ ಇದ್ದ ಅಂತರ ಕೇವಲ ಐದು ಮೀಟರ್ ಅಗಲದ ಒಂದು ಲೇನ್ ಮಾತ್ರ. ಒಂದು ದಿನ ಈ ಹಿರಿಯಜ್ಜಿ ಈ ಲೇನ್ ದಾಟುವ ದೃಢನಿರ್ಧಾರ ಕೈಗೊಂಡರು.
“ಪ್ರತಿದಿನ ನಾನು ಏಳುವ ವೇಳೆಗೆ ಖುಷಿ ಖುಷಿಯಾಗಿ ನಲಿದಾಡುವ ಮಕ್ಕಳು ಬುಲಂದರ್ ಶಹರ್ ನ ಚಾವ್ಳಿ ಗ್ರಾಮದಲ್ಲಿರುವ ನನ್ನ ಮನೆಯ ಮುಂದೆ ಇರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಬರುವುದನ್ನು ನಾನು ಹಲವು ದಶಕಗಳಿಂದ ನೋಡುತ್ತಲೇ ಬಂದಿದ್ದೇನೆ. ಆದಾಗ್ಯೂ ನಾನು ಶಾಲೆಯ ಒಳಕ್ಕೆ ಕಾಲಿಡಲಿಲ್ಲ; ಅವರ ಜತೆಗೆ ನಾನೂ ಕಲಿಯಬೇಕು ಎಂಬ ಬಯಕೆಯನ್ನು ಹತ್ತಿಕ್ಕುತ್ತಲೇ ಜೀವನ ಕಳೆದಿದ್ದೇನೆ” ಎಂದು ಖಾನ್ ಹೇಳುತ್ತಾರೆ. ಎರಡು ದಿನದ ಹಿಂದಷ್ಟೇ ಪರೀಕ್ಷೆ ಬರೆದು, “ಸಾಕ್ಷರ” ಎಂದು ಘೋಷಿಸಲಿರುವ ಫಲಿತಾಂಶಕ್ಕಾಗಿ ಈ ಹಿರಿಯ ಜೀವ ಕಾಯುತ್ತಿದೆ.
“ಕಲಿಯುವುದರಿಂದ ಏನು ಹಾನಿ ಇದೆ?” ಶಾಲೆಗೆ ಬಂದು ಮಕ್ಕಳ ಜತೆ ಕುಳಿತು ಪಾಠ ಕೇಳುತ್ತಾ ಬೊಚ್ಚುಬಾಯಿ ಬಿಟ್ಟು ಮಕ್ಕಳ ಜತೆ ಹರಟುವ ಇವರನ್ನು ಮಕ್ಕಳು ಸುತ್ತುವರಿದಿರುತ್ತಾರೆ. ಈ ಪೈಕಿ ಅವರ ಮೊಮ್ಮಕ್ಕಳೂ ಇದ್ದಾರೆ.
ಸಲೀಮಾ ಆರು ತಿಂಗಳ ಶಿಕ್ಷಣವನ್ನು ಪೂರ್ಣಗೊಳಿಸಿದ್ದು, ಇದೀಗ ಓದಲು ಬರೆಯಲು ಬರುತ್ತದೆ. ಒಂದರಿಂದ 100ರವರೆಗೆ ಇವರು ಸರಾಗವಾಗಿ ಎಣಿಕೆ ಮಾಡುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಉತ್ಸಾಹಿ ಅಜ್ಜಿಯನ್ನು ಶಾಲೆಗೆ ಕರೆದೊಯ್ಯಲು ಮತ್ತು ವಾಪಾಸ್ಸು ಕರೆ ತರಲು ಕುಟುಂಬದ ಇತರ ಸದಸ್ಯರ ನೆರವು ಬೇಕು. “ಆದರೆ ಅದು ದೊಡ್ಡ ವಿಷಯವಲ್ಲ” ಎಂದು ಸಲೀಮಾ ಹೇಳುತ್ತಾರೆ. “ಇದೀಗ ನಾನು ನನ್ನ ಸಹಿ ಮಾಡಬಲ್ಲೆ. ಇದು ಮುಖ್ಯ. ಈ ಮೊದಲು ನನಗೆ ಹಣ ಎಣಿಕೆ ಮಾಡಲು ಬರುತ್ತಿರಲಿಲ್ಲ ಎಂಬ ಕಾರಣಕ್ಕೆ ನನ್ನ ಮೊಮ್ಮಕ್ಕಳು ನನ್ನಿಂದ ಉಪಾಯವಾಗಿ ಹೆಚ್ಚು ಹಣ ಪಡೆಯುತ್ತಿದ್ದರು. ಆ ದಿನಗಳು ಕಳೆದವು” ಎಂದು ಸಲೀಮಾ ಹೆಮ್ಮೆಯಿಂದ ಹೇಳುತ್ತಾರೆ.
15 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಸಾಕ್ಷರ ಭಾರತ ಅಭಿಯಾನದ ಅಂಗವಾಗಿ ಭಾನುವಾರ ನಡೆದ ಪರೀಕ್ಷೆ ಬರೆದ ಅಜ್ಜಿ ಇಡೀ ಪರೀಕ್ಷಾ ಕೇಂದ್ರದಲ್ಲಿ ಕೇಂದ್ರಬಿಂದುವಾಗಿದ್ದರು. “ನಾನು ಚೆನ್ನಾಗಿ ಬರೆದಿದ್ದೇನೆ, ಯಾವ ಹೆದರಿಕೆಯೂ ಇಲ್ಲ” ಎಂದು ಸಲೀಮಾ ವಿಶ್ವಾಸದಿಂದ ಹೇಳುತ್ತಾರೆ.
“ಎಂಟು ತಿಂಗಳ ಹಿಂದೆ ಬಂದು ತರಗತಿಯಲ್ಲಿ ಕುಳಿತುಕೊಳ್ಳಲು ಸಲೀಮಾ ಅವಕಾಶ ಕೇಳಿದ್ದರು. ಇಂಥ ಹಿರಿಯಜ್ಜಿಗೆ ಪಾಠ ಮಾಡುವುದು ನಿಜಕ್ಕೂ ಕಠಿಣ ಕೆಲಸ. ಆದ್ದರಿಂದ ಆರಂಭದಲ್ಲಿ ಹಿಂದೇಟು ಹಾಕಿದ್ದೆವು. ಆದರೆ ಜೀವನದ ಕೊನೆಯ ಘಟ್ಟದಲ್ಲೂ ಕಲಿಕೆ ಬಗ್ಗೆ ಇರುವ ಅವರ ಅದಮ್ಯ ಉತ್ಸಾಹ ನಮ್ಮ ಮನಸ್ಸು ಬದಲಿಸಿತು. ಅವರನ್ನು ತಿರಸ್ಕರಿಸುವ ಹೃದಯ ನಮ್ಮದಾಗಿರಲಿಲ್ಲ” ಎಂದು ಶಾಲೆಯ ಮುಖ್ಯಶಿಕ್ಷಕಿ ಡಾ.ಪ್ರತಿಭಾ ಶರ್ಮಾ ಬಣ್ಣಿಸಿದರು.