ಮಂಡ್ಯ, ಸೆ.23: ಗೂಡ್ಸ್ ವಾಹನ ಉರುಳಿ ಬಿದ್ದು ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಓರ್ವ ಮಹಿಳೆ ಸೇರಿದಂತೆ 13 ಮಂದಿ ಗಾಯಗೊಂಡಿರುವ ಘಟನೆ ಮಳವಳ್ಳಿ ತಾಲೂಕು ಹಲಗೂರು ಸಮೀಪದ ಅಂತರವಳ್ಳಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಹುಸ್ಕೂರು ಗ್ರಾಮ ಪಂಚಾಯತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡಲು ಹುಚ್ಚೇಗೌಡನದೊಡ್ಡಿ ಗ್ರಾಮದಿಂದ ಹುಲ್ಲಾಗಾಲ ಗ್ರಾಮಕ್ಕೆ ಸುಮಾರು 15 ಮಂದಿ ವಾಹನದಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಅಂತರವಳ್ಳಿ ಗ್ರಾಮದ ಸಿದ್ದೇಶ್ವರಸ್ವಾಮಿ ಬೆಟ್ಟದ ತಪ್ಪಲಿನ ತಿರುವಿನಲ್ಲಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಾಗ 14 ಮಂದಿ ಗಾಯಗೊಂಡಿದ್ದು, ಆ ಪೈಕಿ ತೀವ್ರ ಗಾಯಗೊಂಡಿದ್ದ ಹುಚ್ಚೇಗೌಡನದೊಡ್ಡಿ ಗ್ರಾಮದ ಪದ್ಮ(40) ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಗಾಯಗೊಂಡವರನ್ನು ಪಿಎಸ್ಸೈ ಬಿ.ಮಹೇಂದ್ರ ಮತ್ತು ಸಿಬ್ಬಂದಿ ತಮ್ಮ ಇಲಾಖೆ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.