EBM News Kannada
Leading News Portal in Kannada

ಪತ್ನಿ ಸ್ಪಂದನಾ ಮೃತದೇಹದೊಂದಿಗೆ ಬೆಂಗಳೂರಿಗೆ ಬಂದ ವಿಜಯ್ ರಾಘವೇಂದ್ರ – Kannada News | Vijay Raghavendra’s Wife Spandana’s Remains Brought Back To Bengaluru

0


Vijay Raghavendra: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾರ ಮೃತದೇಹವನ್ನು ಬ್ಯಾಂಕಾಕ್​ನಿಂದ ಬೆಂಗಳೂರಿಗೆ ತರಲಾಗಿದೆ. ಮಲ್ಲೇಶ್ವರಂನ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ವಿಜಯ್-ಸ್ಪಂದನಾ

ಬ್ಯಾಂಕಾಕ್​ಗೆ ಪ್ರವಾಸಕ್ಕೆ ತೆರಳಿದ್ದ ನಟ ವಿಜಯ್ ರಾಘವೇಂದ್ರ (Vijay Raghavendea) ಪತ್ನಿ ಸ್ಪಂದನಾ (Spandana) ಆಗಸ್ಟ್ 06ರಂದು ನಿಧನ ಹೊಂದಿದ್ದರು. ಆಗಸ್ಟ್ 6ರ ರಾತ್ರಿವೇ ಪತ್ನಿಯನ್ನು ಕಾಣಲು ಆಸ್ಪತ್ರೆಗೆ ತೆರಳಿದ್ದ ನಟ ವಿಜಯ್ ರಾಘವೇಂದ್ರ ಇಂದು (ಆಗಸ್ಟ್ 08)ರ ರಾತ್ರಿ 11:30 ಸುಮಾರಿಗೆ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಿದ್ದು, ಜೊತೆಗೆ ಪತ್ನಿಯ ಮೃತದೇಹವನ್ನೂ ತಂದಿದ್ದಾರೆ.

ಬ್ಯಾಂಕಾಕ್​ನಲ್ಲಿ ಮರಣೋತ್ತರ ಪರೀಕ್ಷೆಗಳು ಸೇರಿದಂತೆ ಇತರೆ ಎಲ್ಲ ಕಾನೂನು ನಿಯಮಗಳನ್ನು ಮುಗಿಸಿ ಕಾರ್ಗೊ ಮೂಲಕ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬೆಂಗಳೂರಿಗೆ ವಿಜಯ್ ರಾಘವೇಂದ್ರರ ಪತ್ನಿ ಸ್ಪಂದನಾರ ಮೃತದೇಹವನ್ನು ತರಲಾಗಿದೆ. ಈ ವೇಳೆ ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾರ ಹಲವು ಆಪ್ತರು, ಸಂಬಂಧಿಗಳು ಮೃತದೇಹವನ್ನು ಸ್ವೀಕರಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು.

ವಿಜಯ್ ರಾಘವೇಂದ್ರ ಸಹೋದರ ಶ್ರೀಮುರಳಿ, ಇನ್ನೂ ಕೆಲವು ಹತ್ತಿರದ ಸಂಬಂಧಿಕರ ಜೊತೆಗೆ ಕೆಆರ್​ಜಿಯ ಯೋಗಿ ಗೌಡ ಹಾಗೂ ಕೆಲವು ಗೆಳೆಯರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಸ್ಪಂದನಾರ ಚಿಕ್ಕಪ್ಪ ಆಗಿರುವ ಜನಪ್ರಿಯ ರಾಜಕಾರಣಿ ಬಿಕೆ ಹರಿಪ್ರಸಾದ್ ಸಹ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಜೊತೆಗೆ ಮಾಜಿ ಸಚಿವ ಮುನಿರತ್ನ ಸಹ ವಿಮಾನ ನಿಲ್ದಾಣಕ್ಕೆ ಬಂದಿದ್ದರು.

ವಿಜಯ್ ರಾಘವೇಂದ್ರ ಬಂದ ಥಾಯ್ ಏರ್​ವೇಯ್ಸ್​ನ ವಿಮಾನದಲ್ಲಿಯೇ ಕಾರ್ಗೊ ವಿಭಾಗದಲ್ಲಿ ಸ್ಪಂದನಾ ಅವರ ಮೃತದೇಹ ಬಂತು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಟ ವಿಜಯ್ ರಾಘವೇಂದ್ರ ಅವರನ್ನು ಶ್ರೀಮುರಳಿ ಹಾಗೂ ಅವರ ಗೆಳೆಯರು ವಿಮಾನ ನಿಲ್ದಾಣದಿಂದ ನೇರವಾಗಿ ಮನೆಯತ್ತ ಕರೆದೊಯ್ದರು. ಆದರೆ ಸ್ಪಂದನಾರ ಮೃತದೇಹವನ್ನು ತರಲೆಂದು ಆಂಬುಲೆನ್ಸ್ ನೇಮಿಸಲಾಗಿತ್ತು, ಅಂತೆಯೇ ಎಲ್ಲ ಕೆಲವು ನಿಯಮ ಹಾಗೂ ಪರಿಶೀಲನೆಗಳು ಮುಗಿದ ಬಳಿಕ ಸ್ಪಂದನಾರ ಮೃತದೇವಹವನ್ನು ವಿಮಾನ ನಿಲ್ದಾಣದ ಸಿಬ್ಬಂದಿ ಸ್ಪಂದನಾರ ಕುಟುಂಬಕ್ಕೆ ಹಸ್ತಾಂತರಿಸಿದರು.

ಸ್ಪಂದನಾರ ಮಲ್ಲೇಶ್ವರದ ನಿವಾಸದಲ್ಲಿ ಅವರ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲಿಯೇ ಆಗಸ್ಟ್ 09ರ ಮಧ್ಯಾಹ್ನದ ವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಅದಾದ ಬಳಿಕ ಈಡಿಗ ಸಮುದಾಯದ ಪದ್ಧತಿಯಂತೆ ಹರಿಶ್ಚಂದ್ರ ಘಾಟ್​ನಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು.

ಸ್ಪಂದನಾ ಅವರು ತಮ್ಮ ಕಜಿನ್​ಗಳೊಟ್ಟಿಗೆ ಪ್ರವಾಸಕ್ಕಾಗಿ ಬ್ಯಾಂಕಾಂಕ್​ಗೆ ತೆರಳಿದ್ದರು. ಅಲ್ಲಿ ಅವರಿಗೆ ಲೋ ಬಿಪಿಯಿಂದ ಹೃದಯಾಘಾತವಾಗಿ ಮಲಗಿದ್ದ ಸ್ಥಿತಿಯಲ್ಲಿಯೇ ನಿಧನ ಹೊಂದಿದರು. ಅವರಿಗೆ ಕೇವಲ 37 ವರ್ಷ ವಯಸ್ಸಾಗಿತ್ತು. ಸ್ಪಂದನಾ ಹಾಗೂ ವಿಜಯ್ ರಾಘವೇಂದ್ರ ಅವರು ಪ್ರೀತಿಸಿ ವಿವಾಹವಾಗಿದ್ದರು. ಅವರಿಗೆ ಶೌರ್ಯ ಹೆಸರಿನ ಮಗನೊಬ್ಬನಿದ್ದಾನೆ.

ತಾಜಾ ಸುದ್ದಿ

Leave A Reply

Your email address will not be published.